ವಿಟ್ಲ : ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ನೂತನ ಕಟ್ಟಡ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ನೆಲ್ಲಿಗುಡ್ಡೆಯಲ್ಲಿ ಮೇ.1 ರಂದು ಉದ್ಘಾಟನೆಗೊಳ್ಳಲಿದೆ ಎಂದು ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ಅಧ್ಯಕ್ಷ ರಾಮಕಿಶೋರ್ ಮಂಚಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯು 2016 ರಲ್ಲಿ ಕಾರ್ಯಾರಾಂಭ ಮಾಡಿ ಪ್ರತೀವರ್ಷ ಹೊಸ ಹೆಜ್ಜೆಗಳನ್ನಿಡುತ್ತಾ ಹೊಸ ಯೋಜನೆಗಳನ್ನು ರೂಪಿಸುತ್ತಾ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ, ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. 2017 ರಲ್ಲಿ ರೈತರಿಗೆ ಬಾಡಿಗೆಗೆ ಯಂತ್ರ ಕೊಡುವ ಕಾರ್ಯ ಪ್ರಾರಂಭಿಸುದರ ಜೊತೆಗೆ 2018 ರಲ್ಲಿ ಹಲಸು ಹಾಗೂ ಬಾಳೆಕಾಯಿ ಖರೀದಿಯನ್ನು ಪ್ರಾರಂಭಿಸಿತು.
2023ರಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ನೆಲ್ಲಿಗುಡ್ಡೆ ಎಂಬಲ್ಲಿ 3.32 ಎಕ್ರೆ ಜಾಗವನ್ನು 2.50 ಕೋಟಿ ರೂ.ಗಳಿಗೆ ಖರೀದಿಸಿದೆ. ಈ ಜಾಗದಲ್ಲಿ 2 ಎಕ್ರೆ ಅಡಿಕೆ ತೋಟ, 70 ತೆಂಗಿನ ಮರ, 2 ಮನೆ, 2 ಕೊಳವೆಬಾವಿ, ಪಂಪ್, ಪೈಪ್, 1.10 ಎಕ್ರೆ ವಾಣಿಜ್ಯ ಭೂ ಪರಿವರ್ತಿತ ಜಾಗ ಹಾಗೂ 30-40 ಲಕ್ಷ ಮೌಲ್ಯದ ವಿಸ್ತಾರವಾದ ಕಟ್ಟಡವಿದೆ. ಈ ಕಟ್ಟಡವನ್ನು ಅಡಿಕೆ ದಾಸ್ತಾನು ಮಾಡಲು ಸುಸಜ್ಜಿತವಾದ ನೈಟ್ರೋಜನ್ ಚೇಂಬರ್ ದಾಸ್ತಾನು ಕೊಠಡಿಗಳನ್ನಾಗಿ ಪರಿವರ್ತಿಸುವ ಕಾರ್ಯ ಮುನ್ನಡೆಯಲಿದೆ.
ಕಂಪೆನಿಯ ಆಡಳಿತ ಕಚೇರಿಗಾಗಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಯೋಗ್ಯವಾದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಇದಕ್ಕಾಗಿ ನೂತನ ಯಂತ್ರಗಳನ್ನು ವ್ಯವಸ್ಥೆ ಗೊಳಿಸಲಾಗುತ್ತಿದೆ. ಆಡಳಿತ ಕಚೇರಿ ನೂತನ ಕಟ್ಟಡದ ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ ವಿಚಾರ ಸಂಕೀರ್ಣ ನಡೆಯಲಿದ್ದು, ಹಲಸು ಮೌಲ್ಯ ವರ್ಧನೆ ಕೊಕ್ಕೊ ಬೆಳೆ ಕೃಷಿಯಲ್ಲಿ ಕಂಪ್ಯೂಟರೀಕರಣದ ಲಾಭ, ಅಡಿಕೆಗೆ ಪರ್ಯಾಯ ಕಾಳುಮೆಣಸು ಬೆಳೆ, ಮುಂತಾದ ವಿಷಯಗಳ ಬಗೆಗೆ ತಜ್ಞರು ಮಾಹಿತಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಪಿಂಗಾರದ ಕ್ಯಾಂಪಸ್‌ನಲ್ಲಿ ಹಲಸು ಮೇಳ ನಡೆಯಲಿದೆ. ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಕಾಸರಗೋಡು ಸಿಪಿಸಿಆರ್ ಐ ನಿರ್ದೇಶಕ ಡಾ.ಕೆ.ಬಿ ಹೆಬ್ಬಾರ್, ಮಂಗಳೂರು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಡಿ ಮಂಜುನಾಥ, ಹೆ.ಆರ್ ನಾಯಕ್ , ಅಶೋಕ್ ಕುಮಾರ್ ಕೆ.ಎಸ್ ಪ್ರಕಾಶ್ ಎಂ ಎಸ್., ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಪ್ರದೀಪ್ ಎಸ್., ರಾಜರಾಮ್ ಭಟ್ ಸಿ.ಜಿ., ಚಂದ್ರಶೇಖರ ಕೆ.ಜಿ., ಶ್ಯಾಮ್ ಸುಂದರ್ ಎನ್., ರಜತ್ ಕುಮಾರ್ ಎಂ, ಉಪಸ್ಥಿತರಿದ್ದರು.


























