ಕಲಬುರಗಿ : ಕಲ್ಲಿನಿಂದ ಜಜ್ಜಿ, ಬಳಿಕ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿ ವ್ಯಕ್ತಿಯೋರ್ವನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ಮೂಲದ ರವಿಕುಮಾರ್ (45) ಕೊಲೆಯಾದ ವ್ಯಕ್ತಿ.
ಆರೋಪಿ ವಿಜಯ್ ಕುಮಾರ್ ಪತ್ನಿ ಜೊತೆ ಮೃತ ವ್ಯಕ್ತಿ ಅನೈತಿಕ ಸಂಬಂಧ ಹೊಂದಿದ್ದ. ಈ ಹಿನ್ನಲೆ ಮೊದಲು ರವಿಕುಮಾರ್ನನ್ನು ಕೊಂದು ಬಳಿಕ ತನ್ನ ಪತ್ನಿ ನೀಲಮ್ಮಳ ಕೊಲೆಗೂ ಯತ್ನಿಸಿದ್ದಾನೆ.
ಘಟನೆ ವಿವರ
ಪತ್ನಿ ನೀಲಮ್ಮ ಜೊತೆ ರವಿಕುಮಾರ್ ಅನೈತಿಕ ಸಂಬಂಧ ಹೊಂದಿರುವ ವಿಚಾರ ತಿಳಿದ ವಿಜಯ್ ಕುಮಾರ್, ತನ್ನದೇ ಕಾರಿನಲ್ಲಿ ಹೆಂಡತಿ ಮತ್ತು ರವಿಕುಮಾರ್ನನ್ನು ಕರೆದೊಯ್ದಿದ್ದ. ಕಾರಿನಲ್ಲಿ ರವಿಕುಮಾರ್ ಜೊತೆ ಗಲಾಟೆ ತೆಗೆದು ಬಳಿಕ ಕೊಲೆ ಮಾಡಿದ್ದಾನೆ. ಕೊಲೆ ಆರೋಪಿ ವಿಜಯಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


























