ಹಾಸನ : ಮೀನು ಪದಾರ್ಥ ತಿಂದು ಇಬ್ಬರು ಸಾವನ್ನಪ್ಪಿ ಹಲವು ಮಂದಿ ಅಸ್ವಸ್ಥರಾದ ಘಟನೆ ಅರಕಲಗೂಡು ತಾಲೂಕಿನ ಬಸವಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಸವಹಳ್ಳಿ ಗ್ರಾಮದ ರವಿಕುಮಾರ್, ಕೆ.ಆರ್.ನಗರ ತಾಲೂಕಿನ ಸನ್ಯಾಸಿಪುರದ ಪುಟ್ಟಮ್ಮ ಸಾವನ್ನಪ್ಪಿದ್ದಾರೆ. ನೀರಿಲ್ಲದೇ ಬತ್ತಿ ಹೋಗಿದ್ದ ಗ್ರಾಮದ ಕೆರೆಯ ಮೀನನ್ನು ಗ್ರಾಮಸ್ಥರು ಹಿಡಿದಿದ್ದರು. ಖಾಲಿಯಾಗಿದ್ದ ಕೆರೆಯ ಕೆಸರಿನಲ್ಲಿದ್ದ ಮೀನನ್ನು ಹಿಡಿದುಕೊಂಡು ಗ್ರಾಮಸ್ಥರು ಹೋಗಿದ್ದರು.
ಮೀನುಗಳನ್ನು ಹಿಡಿದು ಅಡುಗೆ ಮಾಡಿ ಊಟ ಮಾಡಿದ್ದ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಊಟ ಮಾಡಿದ ನಂತರ ಹದಿನೈದಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರು ಅರಕಲಗೂಡು ಹಾಗೂ ಹಾಸನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗ್ರಾಮಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


























