ಬೆಂಗಳೂರು : ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್.ಐ.ಟಿ ಅಧಿಕಾರಿಗಳ ತನಿಖೆ ಚುರುಕಾಗಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಹೆಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿರುವ ಸಂತ್ರಸ್ತೆಯನ್ನು ಬೆಂಗಳೂರಿಗೆ ಕರೆತರಲಾಗಿದೆ. ರೇವಣ್ಣ ಅವರ ಬಸವನಗುಡಿಯ ನಿವಾಸಕ್ಕೆ ಸಂತ್ರಸ್ತೆಯನ್ನು ಕರೆತಂದು ಅಧಿಕಾರಿಗಳು ಸ್ಥಳ ಮಹಜರು ಮಾಡಿದ್ದಾರೆ.
ಬಸವನಗುಡಿಯಲ್ಲಿರುವ ರೇವಣ್ಣ ನಿವಾಸಕ್ಕೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಸಂತ್ರಸ್ತೆಯನ್ನು ಕರೆ ತರಲಾಗಿದೆ. ಬಸವನಗುಡಿಯಲ್ಲಿರುವ ರೇವಣ್ಣನವರ ಶಿವಸ್ಮಿತ ನಿವಾಸದಲ್ಲಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ. ಸ್ಥಳ ಮಹಜರು ಹಿನ್ನೆಲೆಯಲ್ಲಿ ರೇವಣ್ಣ ಪರ ವಕೀಲರು ಹಾಜರಿದ್ದು, ಯಾರಿಗೂ ಮನೆ ಒಳಗೆ ಪ್ರವೇಶಕ್ಕೆ ಅವಕಾಶ ನೀಡಿಲ್ಲ.
ಸಂತ್ರಸ್ತೆ ನೀಡಿದ ಹೇಳಿಕೆ ಆಧರಿಸಿ ಮನೆಯಲ್ಲಿ ಸಂಪೂರ್ಣ ಮಹಜರು ಮಾಡಲಾಗಿದೆ. ನಾಲ್ವರು ಮಹಿಳಾ ಅಧಿಕಾರಿಗಳು ಸೇರಿ ಆರು ಮಂದಿ ಅಧಿಕಾರಿಗಳ ತಂಡ ರೇವಣ್ಣ ಅವರ ಮನೆಗೆ ಭೇಟಿ ನೀಡಿದೆ.
ಹೊಳೆನರಸೀಪುರ ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನ ಮೇಲೆ ಹೆಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಸೆಕ್ಷನ್ ಅಡಿ ಕೇಸ್ ದಾಖಲಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಹೊಳೆನರಸೀಪುರ ನಿವಾಸದಲ್ಲಿ ಮಹಜರು ನಡೆಸಿದ್ದ ಎಸ್.ಐ.ಟಿ ಅಧಿಕಾರಿಗಳು ರೇವಣ್ಣರ ಬಸವನಗುಡಿ ನಿವಾಸಕ್ಕೆ ಸಂತ್ರಸ್ಥೆಯನ್ನ ಕರೆತಂದಿದ್ದಾರೆ.
ರೇವಣ್ಣ ಅವರ ಬಸವನಗುಡಿ ನಿವಾಸದಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ಮಾಡಿದ್ದಾರೆ. ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಪಟ್ಟಂತೆ ಎಸ್‌ಐಟಿ ಅಧಿಕಾರಿಗಳು ಹೊಳೆನರಸೀಪುರ ಸಂತ್ರಸ್ತೆಯಿಂದ ಹೇಳಿಕೆ ದಾಖಲು ಮಾಡಿದ್ದರು. ಈ ಆರೋಪಗಳ ಹಿನ್ನೆಲೆಯಲ್ಲಿ ಘಟನೆ ನಡೆದ ಸ್ಥಳದಲ್ಲೇ ಸ್ಥಳ ಮಹಜರು ಪ್ರಕ್ರಿಯೆ ಮಾಡಲಾಗಿದೆ. ಸ್ಥಳ ಮಹಜರು ಮಾಡುತ್ತಿರುವುದನ್ನು ಅಧಿಕಾರಿಗಳು ಚಿತ್ರೀಕರಣ ಮಾಡುತ್ತಿದ್ದಾರೆ.


























