ಮಂಗಳೂರು : ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮೇ.7 ರಂದು ನಡೆಯಲಿದೆ.
ಉತ್ತರ ಕರ್ನಾಟಕದ ವಿವಿಧ ಕ್ಷೇತ್ರಗಳು ಸೇರಿದಂತೆ ಒಟ್ಟು 14 ಕ್ಷೇತ್ರಗಳಿಗೆ ಈ ಬಾರಿ ಚುನಾವಣೆ ನಡೆಯುತ್ತಿದ್ದು, ಮಂಗಳೂರು ಹಾಗೂ ಉಡುಪಿ ನಗರ ಮತ್ತು ಆಸುಪಾಸಿನಲ್ಲಿರುವ ವಾಸವಾಗಿರುವ ಕಾರ್ಮಿಕರು, ಉದ್ಯೋಗಿಗಳು ರವಿವಾರ ರಾತ್ರಿಯೇ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದರು.
ಕೆಎಸ್ಸಾರ್ಟಿಸಿ ಬಸ್ ತಂಗುದಾಣದಲ್ಲಿ ಜನಜಾತ್ರೆಯೇ ಕಂಡು ಬಂದಿತ್ತು. ಮಕ್ಕಳಿಗೂ ರಜೆ ಇರುವುದರಿಂದ ಕುಟುಂಬ ಸಮೇತ ಊರಿಗೆ ತೆರಳುವ ಸಾಕಷ್ಟು ಮಂದಿ ಕಂಡು ಬಂದರು.
ನಿಲ್ದಾಣದ ಟಿಕೆಟ್ ಕೌಂಟರ್, ವಿಚಾರಣಾ ಕೌಂಟರ್‌ಗಳಲ್ಲಿ ದಟ್ಟಣೆಯಿತ್ತು. ಉತ್ತರ ಕರ್ನಾಟಕ ಭಾಗಕ್ಕೆ ತೆರಳುವ ಎಲ್ಲ ಬಸ್ ಗಳಲ್ಲಿ ಸೀಟುಗಳು ಭರ್ತಿಯಾಗಿದ್ದವು. ಇನ್ನಷ್ಟು ಮಂದಿ ಸೋಮವಾರ (ಇಂದು) ತೆರಳುವ ನಿರೀಕ್ಷೆಯಿದೆ.
ಕಟ್ಟಡ ನಿರ್ಮಾಣ, ತ್ಯಾಜ್ಯ ವಿಲೇವಾರಿ, ಮನೆ ಕೆಲಸ, ಕೂಲಿ, ಮೀನುಗಾರಿಕೆ, ಕಾರ್ಖಾನೆಗಳು ಸೇರಿದಂತೆ ವಿವಿಧ ಕೆಲಸಗಳಲ್ಲಿ ಉತ್ತರ ಕರ್ನಾಟಕ ಭಾಗದ ಮಂದಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಗರ ಮತ್ತು ಹೊರವಲಯದಲ್ಲಿ ಸಾವಿರಾರು ಮಂದಿ ಇಂತಹ ಕಾರ್ಮಿಕರಿದ್ದು, ಊರಿಗೆ ತೆರಳುವುದರಿಂದ ಕೆಲವು ಕೆಲಸಗಳಿಗೆ ಕಾರ್ಮಿಕರ ಕೊರತೆಯಾಗಲಿದೆ.


























