ಬೆಂಗಳೂರು : 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟಕ್ಕೆ ದಿನಗಣನೆ ಶುರುವಾಗಿದೆ. ಕರ್ನಾಟಕ ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ವಾರವೇ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ ಎಂದು ವರದಿಯಾಗಿದೆ.
2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಕಳೆದ ಮಾರ್ಚ್ 25 ರಿಂದ ಏಪ್ರಿಲ್ 6, 2024ರವರೆಗೆ ನಡೆದಿತ್ತು. ಪರೀಕ್ಷೆ-1 ಬರೆದಿರುವ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಕೊನೆಗೂ ಕಾಯುವಿಕೆಯ ಸಮಯ ಕೊನೆಯಾಗುತ್ತಿದೆ.
ಈ ಬಾರಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುವುದು ತಡವಾಗಿದೆ. ಎಸ್.ಎಸ್.ಎಲ್.ಸಿ ಮೌಲ್ಯಮಾಪನ ಈಗಾಗಲೇ ಸಂಪೂರ್ಣವಾಗಿದ್ದು, ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಲು ಸರ್ವ ಸಿದ್ಧತೆಯನ್ನು ಮಾಡಿಕೊಂಡಿದೆ.
ನಾಳೆ ಅಂದ್ರೆ ಮೇ 7ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮತದಾನ ಮುಗಿದ ಎರಡು ದಿನದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಿಸಲು ಪರೀಕ್ಷಾ ಮಂಡಳಿ ಮೂಲಗಳಿಂದ ಖಚಿತ ಮಾಹಿತಿ ಲಭ್ಯವಾಗಿದೆ. ಇದೇ ಮೇ 8 ಬುಧವಾರ ಇಲ್ಲವೇ ಮೇ 9ರ ಗುರುವಾರ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಮೇ 10 ಬಸವ ಜಯಂತಿ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದೆ. ಹೀಗಾಗಿ ಮೇ 9ರೊಳಗೆ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ ಮಾಡಲು ಪರೀಕ್ಷಾ ಮಂಡಳಿ ಮೂಲಗಳಿಂದ ಖಚಿತ ಮಾಹಿತಿ ಲಭ್ಯವಾದ ಬಗ್ಗೆ ವರದಿಯಾಗಿದೆ.


























