ಉತ್ತರ ಪ್ರದೇಶ: ಆಗ್ರಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಲ್ಲಿದೆ. ಮಹಿಳೆಯೊಬ್ಬಳು ತನ್ನ ಪತಿ 5 ರೂಪಾಯಿ ಬೆಲೆಯ ಕುರ್ಕುರೆ ಚಿಪ್ಸ್ ತರಲಿಲ್ಲ ಎಂಬ ಕಾರಣಕ್ಕೆ ಆತನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಇದಲ್ಲದೇ ಡಿವೋರ್ಸ್ ಕೊಡಲು ಮುಂದಾಗಿದ್ದಾಳೆ.
ಮಹಿಳೆ ಕಳೆದ ಒಂದೂವರೆ ತಿಂಗಳಿನಿಂದ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದು, ಇತ್ತೀಚೆಗಷ್ಟೇ ಆಕೆ ತನ್ನ ಗಂಡನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಳು. ಮಹಿಳೆಯ ದೂರನ್ನು ಫ್ಯಾಮಿಲಿ ಕೌನ್ಸೆಲಿಂಗ್ ಸೆಲ್‌ಗೆ ವರ್ಗಾಯಿಸಲಾಗಿದ್ದು, ಪತಿ-ಪತ್ನಿಯನ್ನು ಕೌನ್ಸೆಲಿಂಗ್‌ಗಾಗಿ ಸೆಲ್‌ಗೆ ಕರೆಸಲಾಗಿತ್ತು. ಈ ವೇಳೆ ಇವರಿಬ್ಬರ ನಡುವಿನ ಜಗಳಕ್ಕೆ 5 ರೂ. ಕುರ್ಕುರೆ ಕಾರಣ ಎಂದು ತಿಳಿದುಬಂದಿದೆ.

ಪತಿ-ಪತ್ನಿ ಇಬ್ಬರಿಗೂ ಕೌನ್ಸಿಲಿಂಗ್ ಮಾಡಿದ ಡಾ.ಸತೀಶ್ ಖೀರವಾರ ಅವರು ಹೇಳುವಂತೆ ಕಳೆದ ವರ್ಷ 2023 ರಲ್ಲಿ ವಿವಾಹವಾಗಿದ್ದ ಈ ಜೋಡಿ ಕೇವಲ ಒಂದು ವರ್ಷದಲ್ಲೇ ವಿಚ್ಛೇಧನ ನೀಡಲು ಮುಂದಾಗಿದ್ದಾರೆ.
ಪತಿ ತನಗೆ ಹೊಡೆಯುತ್ತಾನೆ ಎಂದು ಹೆಂಡತಿ ಹೇಳಿದರೆ, 5 ರೂಪಾಯಿ ಬೆಲೆಯ ಕುರ್ಕುರೆಗೆ ಹೆಂಡತಿ ಜಗಳವಾಡಿದ್ದಾಳೆ ಎಂದು ಗಂಡ ಹೇಳುತ್ತಾನೆ. ಕುರ್ಕುರೆಯನ್ನು ತಾನು ತರದ ಕಾರಣ ಆಕೆ ತಾಯಿ ಮನೆಗೆ ಹೋಗಿದ್ದಾಳೆ ಎಂದು ಪತಿ ಹೇಳಿದ್ದಾನೆ. ಪ್ರಕರಣವನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕದಂದು ಇಬ್ಬರ ನಡುವೆ ರಾಜಿಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.