ಬಂಟ್ವಾಳ : ಗಾಂಜಾ ಸೇವಿಸಿ ಅಡ್ಡಾದಿಡ್ಡಿ ದ್ವಿಚಕ್ರ ವಾಹನ ಓಡಿಸುವ ಜೊತೆಗೆ ಮಾರಾಟಕ್ಕೆ ಮಾದಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯ ವಿರುದ್ಧ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಲೊರೆಟ್ಟೋಪದವು ನಿವಾಸಿ ದಾವುದುಲ್ ಹಕೀಮ್ ಪ್ರಕರಣದ ಆರೋಪಿಯಾಗಿದ್ದು, ಹಕೀಮ್ ದ್ವಿಚಕ್ರ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬರುತ್ತಿದ್ದಾಗ ಬಂಟ್ವಾಳ ನಗರ ಠಾಣಾ ಪಿಎಸ್ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿ ತಡೆದು ವಿಚಾರಿಸಿದಾಗ ಗಾಂಜಾವನ್ನು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದ. ಆತನ ದ್ವಿಚಕ್ರ ವಾಹನವನ್ನು ಪರಿಶೀಲಿಸಿದಾಗ 1.07 ಗ್ರಾಂ ಎಂಡಿಎಂಎ ಹಾಗೂ 15.31 ಗ್ರಾಂ ಗಾಂಜಾ ಪತ್ತೆಯಾಗಿದೆ.
ಅಪರಿಚಿತನೋರ್ವನಿಂದ ಖರೀದಿಸಿ ಅದರಲ್ಲಿ ಸ್ವಲ್ಪ ಗಾಂಜಾ ಸೇವಿಸಿ ಉಳಿದದ್ದನ್ನು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿರುವುದಾಗಿ ಹಕೀಮ್ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನಿಂದ 2,500 ರೂ. ಮೌಲ್ಯದ ಮಾದಕ ವಸ್ತುಗಳು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























