ಮಂಗಳೂರು : ಐಸಿಸ್ ನಂಟು ಪ್ರಕರಣದಲ್ಲಿ ಎನ್.ಐ.ಎಯಿಂದ ಬಂಧನಕ್ಕೊಳಗಾಗಿದ್ದ ಉಳ್ಳಾಲದ ಮಾಜಿ ಶಾಸಕ ದಿ. ಇದಿನಬ್ಬರವರ ಮೊಮ್ಮಗ ಅಮ್ಮರ್ ಅಬ್ದುಲ್ ರೆಹಮಾನ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
2021ರ ಆಗಸ್ಟ್ 21 ರಂದು ಬಂಧನಕ್ಕೊಳಗಾಗಿದ್ದ ರೆಹಮಾನ್ ಮೊಬೈಲ್ ನಲ್ಲಿ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳಿಗೆ ಐಸಿಸ್ ಪರವಾದ ಬಾವುಟ, ಕರಪತ್ರ ವೀಡಿಯೋಗಳು ಸಿಕ್ಕಿದ್ದವು. ಇದನ್ನು ಕೋರ್ಟ್‍ಗೂ ನೀಡಲಾಗಿತ್ತು. ಈ ನಡುವೆ ಬಂಧನ ಪ್ರಶ್ನಿಸಿ ವಿಚಾರಣಾಧೀನ ಕೋರ್ಟ್ ನಲ್ಲಿ ರೆಹಮಾನ್ ಜಾಮೀನು ಅರ್ಜಿ ಸಲ್ಲಿಸಿದ್ದು, ಕೋರ್ಟ್ ಜಾಮೀನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಸುದೀರ್ಘ ವಿಚಾರಣೆ ಬಳಿಕ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
ಜಾಮೀನು ಆದೇಶದಲ್ಲಿ ಹಲವು ಅಂಶಗಳನ್ನು ದೆಹಲಿ ಹೈಕೋರ್ಟ್ ಉಲ್ಲೇಖಿಸಿದ್ದು, ಉಗ್ರ ಸಂಘಟನೆ ಜೊತೆಗಿನ ಆಕರ್ಷಣೆಯನ್ನು ಉಗ್ರ ನಂಟು ಎನ್ನಲು ಆಗಲ್ಲ. ಐಸಿಸ್ ಬಾವುಟ, ಕರಪತ್ರ ಮೊಬೈಲ್ ನಲ್ಲಿದ್ದರೆ ಉಗ್ರ ಎನ್ನಲು ಪೂರಕ ಸಾಕ್ಷ್ಯವಲ್ಲ. ಇವುಗಳೆಲ್ಲ ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ ನೆಟ್ ನಲ್ಲಿ ಸಿಗುತ್ತದೆ. ಕುತೂಹಲ ಇರೋ ಯಾರು ಬೇಕಾದರೂ ಮೊಬೈಲ್, ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಬಹುದು. ಹಾಗಾಗಿ ಇದನ್ನ ಇಟ್ಟು ಕೊಂಡವರನ್ನ ಐಸಿಸ್ ನಂಟನ್ನ ಸಾಬೀತುಪಡಿಸಲು ಆಗಲ್ಲ ಎಂದು ಮಹತ್ವದ ತೀರ್ಪು ನೀಡಿದೆ.

























