ಉಡುಪಿ : ಜಗತ್ತಿನ ಅತ್ಯಂತ ಮೌಲ್ಯಯುತ ಮತ್ತು ದುಬಾರಿ ಮಾವಿನ ಹಣ್ಣು ಎಂದೇ ಹೇಳಲಾದ ಜಪಾನ್ ಮೂಲದ ಮಿಯಾಝಕಿ ಮಾವಿನ ತಳಿ ಇದೀಗ ಕರಾವಳಿಯ ಮನೆಯೊಂದರ ತಾರಸಿಯಲ್ಲಿ ಬೆಳೆದಿದೆ.
ತಾರಸಿ ಕೃಷಿ ಪ್ರಯೋಗದಲ್ಲಿ ಹೆಸರುವಾಸಿಯಾದ ಉಡುಪಿ ಜಿಲ್ಲೆಯ ಶಂಕರಪುರದ ಜೋಸೆಫ್ ಲೋಬೋ ಅವರ ತೋಟದಲ್ಲಿ ಈ ಮಾವು ಹಣ್ಣುಬಿಟ್ಟಿದೆ.
ಮಿಯಾಝಾಕಿ ಎನ್ನುವುದು ಜಪಾನ್‌ನ ವಿಶೇಷ ತಳಿ. ಇದನ್ನು ಅಲ್ಲಿ ಪಾಲಿಹೌಸ್‌ನಲ್ಲಿ ಹೀಟರ್ ಇಟ್ಟು ಅದಕ್ಕೆ ಬೇಕಾದ ವಾತಾವರಣ ಸೃಷ್ಟಿಸಿ ಬೆಳೆಸಲಾಗುತ್ತದೆ. ಇದು ಕಾಯಿಯ ಹಂತದಲ್ಲಿ ನೇರಳೆ ಬಣ್ಣದಲ್ಲಿದ್ದು, ಹಣ್ಣಾಗುವಾಗ ಬೆಂಕಿ ಜ್ವಾಲೆಯ ಬಣ್ಣ ಬರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಣ್ಣಿನ ಬೆಲೆ ಕೆ.ಜಿ.ಗೆ 2.3 ಲಕ್ಷ ರೂ.ನಿಂದ 2.7 ಲಕ್ಷ ರೂ. ವರೆಗೆ ಇದೆ. ರುಚಿಯಲ್ಲಿ ಮಲ್ಲಿಕಾ ತಳಿಯನ್ನು ಹೋಲುವ ಈ ಹಣ್ಣಿನಲ್ಲಿ ಔಷಧೀಯ ಗುಣಗಳಿರುವುದರಿಂದ ಇದಕ್ಕೆ ಹೆಚ್ಚು ಬೇಡಿಕೆ.
ಜೋಸೆಫ್ ಅವರು ಕೇರಳದ ಕಣ್ಣೂರಿನಲ್ಲಿ ಮೂರುವರೆ ವರ್ಷದ ಹಿಂದೆ ನಡೆದ ಕೃಷಿ ಮೇಳದಲ್ಲಿ 16,800 ರೂ. ಕೊಟ್ಟು ಮಿಯಾಝಕಿ ತಳಿಯ ಮಾವಿನ ಗಿಡ ಖರೀದಿಸಿದ್ದರು. ಎರಡೂವರೆ ವರ್ಷದ ಹಿಂದೆ ಇದು ಹೂವು ಮಾತ್ರ ಬಿಟ್ಟಿತ್ತು. ಗ್ರೋಬ್ಯಾಗ್‌ನಲ್ಲಿ ಸಾವಯವ ಗೊಬ್ಬರ ಹಾಕಿ ಬೆಳೆಸಿದ ಗಿಡ ಈಗ ಕೆಂಪು, ಸಾದಾ ಹಸುರು ಬಣ್ಣದ ಸಿಪ್ಪೆಯೊಂದಿಗೆ ಮೂರು ಫಲವನ್ನು ನೀಡಿದೆ. ಒಂದೊಂದು ಹಣ್ಣು 600ರಿಂದ 650 ಗ್ರಾಂ ತೂಗುತ್ತಿದೆ.
ಮಿಜಾಝಕಿ ತಳಿಯ ಮಾವು ಜಪಾನ್, ಅರಬ್ ರಾಷ್ಟ್ರ ಮತ್ತು ಗುಜರಾತ್‌ನ ಹವಾಗುಣದಲ್ಲಿ ಬೆಂಕಿಯ ಜ್ವಾಲೆಯ ಬಣ್ಣವನ್ನು ಪಡೆಯುತ್ತದೆ. ಆದರೆ ಶಂಕರಪುರದಲ್ಲಿ ಬೆಳೆದ ಮಾವಿಗೆ ಆ ಬಣ್ಣ ಬಂದಿಲ್ಲ. ಇದಕ್ಕೆ ಜನವರಿ ತಿಂಗಳಿನಲ್ಲಿ ಸುರಿದ ಮಳೆಯೂ ಕಾರಣ ಇರಬಹುದು ಎನ್ನುತ್ತಾರೆ ಜೋಸೆಫ್ ಲೋಬೋ.
ಈ ತಳಿಯನ್ನು ರಾಜ್ಯದಲ್ಲಿ ಕೊಪ್ಪಳ, ಶಿವಮೊಗ್ಗದಲ್ಲೂ ಬೆಳೆಯುತ್ತಾರೆ. ಆದರೆ ತಾರಸಿಯಲ್ಲಿ ಬೆಳೆದದ್ದು ಇದೇ ಮೊದಲು. ನೆಲದಲ್ಲೇ ನೆಟ್ಟರೆ ಸುಮಾರು 15 ಅಡಿ ಬೆಳೆಯುವ ಈ ಮರ ತಾರಸಿಯಲ್ಲಿ ನಾಲ್ಕೂವರೆ ಅಡಿ ಎತ್ತರ ಬೆಳೆದಿದೆ. ಮುಂದೆ ದೊಡ್ಡ ಗಾತ್ರದ ಗ್ರೋ ಬ್ಯಾಗ್ ಬಳಸಿ ಹೆಚ್ಚುವರಿ ಸಾವಯವ ಗೊಬ್ಬರ ನೀಡಿದರೆ 6.5 ಎತ್ತರ ಬೆಳೆಯಬಲ್ಲುದು, 1 ಕಿಲೋ ಗಾತ್ರದ ಮಾವಿನ ಹಣ್ಣನ್ನು ಪಡೆಯಬಹುದು ಎನ್ನುತ್ತಾರೆ ಜೋಸೆಫ್.

























