ಬೆಳ್ತಂಗಡಿ : ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವಾದ ಘಟನೆ ಸಂಭವಿಸಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಅಂತುಬಾಯಮ್ಮ ಚಿನ್ನಾಭರಣ ನಗದು ಕಳೆದುಕೊಂಡವರು.
ಅಂತುಬಾಯಮ್ಮ ಮೇ.15ರಂದು ಬೆಳಗ್ಗೆ ಧರ್ಮಸ್ಥಳದಲ್ಲಿ ದೇವರ ದರ್ಶನ ಮುಗಿಸಿ ಸೌತಡ್ಕ ದೇವಸ್ಥಾನಕ್ಕೆ ಹೋಗಿದ್ದರು. ಧರ್ಮಸ್ಥಳದಿಂದ ಹೊರಡುವ ವೇಳೆ ಅವರ ಬ್ಯಾಗಿನಲ್ಲಿ ಇಟ್ಟಿದ್ದ ಪರ್ಸಿನಲ್ಲಿ ಚಿನ್ನಾಭರಣ ಹಾಗೂ ನಗದು ಇತ್ತು. ಸೌತಡ್ಕ ದೇವಸ್ಥಾನ ತಲುಪಿ ಅಂಗಡಿಯಲ್ಲಿ ಹಣ ಕೊಡಲು ಪರ್ಸ್ ಹುಡುಕಿದಾಗ ಪರ್ಸ್ ನಾಪತ್ತೆಯಾಗಿತ್ತು.
ಪರ್ಸಿನಲ್ಲಿದ್ದ 2,21,000 ಮೌಲ್ಯದ ಚಿನ್ನಾಭರಣ ಹಾಗೂ ಐದು ಸಾವಿರ ನಗದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.
ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


























