ಬೆಂಗಳೂರು : ಇಷ್ಟು ದಿನ ಬೇಸಿಗೆ ಇತ್ತು ಮೊಟ್ಟೆ, ಮಾಂಸ ತಿನ್ನುವುದನ್ನು ಜನರು ಕಡಿಮೆ ಮಾಡಿದ್ದರು. ಇದೀಗ ಮಳೆಗಾಲ ಆರಂಭವಾಗುತ್ತಿದ್ದು, ದೇಹವನ್ನು ಬೆಚ್ಚಗೆ ಮಾಡಿಕೊಳ್ಳೊಣ ಅಂತ ಮಾಂಸ ಖರೀದಿಸಿ ರುಚಿಕರವಾದ ಆಹಾರ ತಯಾರಿಸಿ, ಸವಿಯೋಣ ಎಂದುಕೊಂಡಿರುವ ಮಾಂಸಪ್ರಿಯರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಚಿಕನ್ ಬೆಲೆ ಗಗನಕ್ಕೆ ಏರಿಕೆಯಾಗಿದ್ದು, ಬೆಲೆ ಕೇಳಿ ಗ್ರಾಹಕರು ದಂಗಾಗಿದ್ದಾರೆ.
ಇಷ್ಟು ದಿನ ತರಕಾರಿಗಳ ಬೆಲೆ ಏರಿಕೆಯಾಗಿತ್ತು. ಇದೀಗ ಹವಮಾನ ವೈಪರಿತ್ಯದಿಂದ ಮಾಂಸ ಮತ್ತು ಮೊಟ್ಟೆ ಬೆಲೆ ಕೂಡ ಹೆಚ್ಚಳವಾಗಿದೆ. ಕೆಜಿ ಚಿಕನ್ಗೆ 380 ರೂ ಆಗಿದೆ. ಕೆಜಿ ಮಟನ್ಗೆ 800 ರೂ. ಆಗಿದ್ದು, ಮೊಟ್ಟೆಗೆ 8 ರಿಂದ 7 ರೂ. ನಿಗದಿ ಮಾಡಲಾಗಿದೆ.
ಬೇಸಿಗೆ ಇದ್ದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಷ ಕೋಳಿ ಸಾಕಾಣೆಯಾಗಿಲ್ಲ. ಇದೀಗ ಬೇಡಿಕೆ ಜಾಸ್ತಿಯಾಗಿದೆ. ಬೇಡಿಕೆಗೆ ತಕ್ಕಷ್ಟು ಕೋಳಿ ಮಾಂಸದ ಪೂರೈಕೆ ಇಲ್ಲದ ಕಾರಣ ಮಾಂಸಾಹಾರ ಬೆಲೆ ಕೂಡ ಏರಿಕೆಯಾಗಿದೆ. ಅಲ್ಲದೆ ಮದುವೆ ಸೀಜನ್ನಲ್ಲಿ ಮಾಂಸಾಹಾರಕ್ಕೂ ಹೆಚ್ಚು ಬೇಡಿಕೆ ಇರುವುದರಿಂದ, ಮುಂದಿನ ಒಂದು ತಿಂಗಳವರೆಗೂ ಮಾಂಸದ ಬೆಲೆ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.


























