ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ರವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಶಶಿರಾಜ್ ಶೆಟ್ಟಿ ಬಂಧನ ವಿರೋಧಿಸಿ ನಡೆಸಿದ ಪ್ರತಿಭಟನೆ ಹಿನ್ನೆಲೆ ಮತ್ತೊಂದು ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಠಾಣೆಯಲ್ಲಿ ಮೇ.18 ರಂದು ವರದಿಯಾಗಿರುವ ಅ.ಕ್ರ: 56/2024, ಕಲಂ: 9B(1)(b) Explosive act 1884 ಕಲಂ 5 The Explosives Substance Act-1908 ಪ್ರಕರಣ ಸಂಬಂಧಿಸಿದಂತೆ, ಶಶಿರಾಜ್ ಶೆಟ್ಟಿ ಎಂಬಾತನ ಬಂಧನವನ್ನು ವಿರೋಧಿಸಿ, ಮೇ.20 ರಂದು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ, ಕಾನೂನುಬಾಹಿರವಾಗಿ, ಬೆಳ್ತಂಗಡಿ ವಿಕಾಸ ಸೌಧದ ಮುಂಭಾಗದಲ್ಲಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಮತ್ತು ಇತರರು ಜನರನ್ನು ಗುಂಪು ಸೇರಿಸಿ, ಪ್ರತಿಭಟನಾ ಸಭೆ ನಡೆಸಿದ್ದು, ಸದ್ರಿ ಪ್ರತಿಭಟನಾ ಸಭೆಯಲ್ಲಿ, ಹರೀಶ್ ಪೂಂಜ ರವರು ಪ್ರಸ್ತುತ ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ, ಪೊಲೀಸರ ಕಾಲರ್ ಹಿಡಿಯಲು ಸಿದ್ದನೆಂದು ಹಾಗೂ ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆಂದು ಬೆದರಿಸಿ, ಸಾರ್ವಜನಿಕ ನೌಕರರಾದ, ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಮತ್ತು ಇತರೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿ, ಜೀವ ಬೆದರಿಕೆ ಒಡ್ಡಿರುತ್ತಾರೆ ಹಾಗೂ ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿರುತ್ತಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 58/2024 , ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.


























