ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ಬಂಧನ ಪ್ರಕ್ರಿಯೆಗೆ ಸಂಬಂಧಿಸಿದ ಹೈಡ್ರಾಮದ ನಡುವೆ ಇದೀಗ ಕೆಎಸ್ಆರ್ ಪಿ ತುಕಡಿಯೊಂದಿಗೆ ಬಂದಿದ್ದ ಡಿವೈಎಸ್ ಪಿ ಹಾಗೂ ಬೆಳ್ತಂಗಡಿ ವೃತ್ತನಿರೀಕ್ಷಕರ ತಂಡ ಎರಡು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿ ಹಿಂದಿರುಗಿದೆ.
ಬಿಜೆಪಿ ಮುಖಂಡ ಶಶಿರಾಜ್ ಶೆಟ್ಟಿ ಬಂಧನಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜ ಪೊಲೀಸರ ನಡುವೆ ಉಂಟಾದ ಮಾತಿನ ಚಕಮಕಿ ಹಾಗೂ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾದ ಎರಡು ಪ್ರಕರಣಗಳ ವಿಚಾರವಾಗಿ ಮುಂಜಾನೆಯಿಂದ ಸಂಜೆವರೆಗೆ ಬಂಧನ ಪ್ರಹಸನ ಏರ್ಪಟ್ಟಿತ್ತು.
ಪೊಲೀಸರು ಹಾಗೂ ನ್ಯಾಯವಾದಿಗಳ ನಡುವೆ ದಿನಪೂರ್ತಿ ಮಾತುಕತೆ ನಡೆದ ಬಳಿಕ ಶಾಸಕರ ಬಂಧಿಸಿಯೇ ಸಿದ್ದ ಎಂಬ ವಾತಾವರಣವನ್ನು ಪೊಲೀಸರು ಸೃಷ್ಟಿಸಿದ್ದರು. ನಾಲ್ಕು ಕೆ.ಎಸ್.ಆರ್.ಪಿ. ತಯಕಡಿಯನ್ನು ಗರ್ಡಾಡಿ ಪ್ರದೇಶದಲ್ಲಿ ಇರಿಸಲಾಗಿದೆ. ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಎಸ್.ಐ., ವೃತ್ತ ನಿರೀಕ್ಷಕರನ್ನು ನಿಯೋಜಿಸಲಾಗಿತ್ತು.
ಸಂಜೆ ಪೊಲೀಸರ ಮನೆಗೆ ನುಗ್ಗುತ್ತಲೆ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಪೊಲೀಸರನ್ನು ತಡೆದು ಘರ್ಷಣೆ ಏರ್ಪಡುವ ಸಂದರ್ಭ ಬಂದೊದಗಿತ್ತು. ತಕ್ಷಣ ಸಂಸದ ನಳಿನ್ ಕುಮಾರ್ ಕಟೀಲ್ ಪೊಲೀಸರೆಡೆಗೆ ಬಂದು ತನ್ನನ್ನು ಬಂಧಿಸುವಂತೆ ಕೇಳಿಕೊಂಡರು. ಬಳಿಕ ಡಿವೈಎಸ್ ಪಿ ಹಾಗೂ ವೃತ್ತ ನಿರೀಕ್ಷಕರಿಗೆ ಮನೆ ಒಳಗೆ ಬರಲು ಅವಕಾಶ ಕೋರಿದಂತೆ ಶಾಸಕ ಹರೀಶ್ ಪೂಂಜ ಕಾರ್ಯಕರ್ತರಲ್ಲಿ ವಿನಂತಿಸಿದಂತೆ ಅವಕಾಶ ಕಲ್ಪಿಸಲಾಯಿತು. ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ತೆರಳಿದ ಬಳಿಕ ದಿನದ ಹೈಡ್ರಾಮ ಅಂತ್ಯವಾಯಿತು.