ಬೆಂಗಳೂರು : ಹಾಸನದ ಅಶ್ಲೀಲ ವೀಡಿಯೋಗಳಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ಪತ್ರ ಆಧರಿಸಿ ವಿದೇಶಾಂಗ ಇಲಾಖೆಯು ಸಂಸದ ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಕೆಲವೇ ದಿನಗಳಲ್ಲಿ ಪ್ರಜ್ವಲ್ ವಿಶೇಷ ತನಿಖಾ ತಂಡದ (ಎಸ್‌ಐಟಿ) ಬಲೆಗೆ ಬೀಳುವ ಸಾಧ್ಯತೆಗಳಿವೆ.
ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಅಶ್ಲೀಲ ಪೆನ್‌ಡ್ರೈವ್ ಕೇಸ್‌ನ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಎಸ್‌ಐಟಿ ಹಗಲಿರುಳೆನ್ನದೆ ಪಣ ತೊಟ್ಟು ನಿಂತಿದೆ.
ಪ್ರಜ್ವಲ್ ಜರ್ಮನಿಗೆ ತೆರಳಿರುವುದೇ ಎಸ್‌ಐಟಿ ಬಂಧನಕ್ಕೆ ಅಡ್ಡಿಯಾಗಿತ್ತು. ಕಾನೂನು ತಜ್ಞರ ಮೊರೆ ಹೋಗಿರುವ ಎಸ್‌ಐಟಿಯು ಪಾಸ್‌ಪೋರ್ಟ್ ರದ್ದುಮಾಡಿಸಿ ಪ್ರಜ್ವಲ್ ರೇವಣ್ಣರನ್ನು ಕಟ್ಟಿಹಾಕುವ ಮಾರ್ಗ ಕಂಡುಕೊಂಡಿದೆ. ಈಗ ದೇಶದ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ರದ್ದುಮಾಡುವ ಪ್ರಕ್ರಿಯೆ ಆರಂಭಿಸಿದೆ ಎನ್ನಲಾಗಿದೆ. ಇದರಿಂದ ಪ್ರಜ್ವಲ್‌ಗೆ ಸಂಕಷ್ಟ ಎದುರಾಗಲಿದ್ದು, ಶೀಘ್ರದಲ್ಲಿ ಅವರು ದೇಶಕ್ಕೆ ವಾಪಸ್ಸಾಗುವ ಸಾಧ್ಯತೆಗಳಿವೆ.
ಪಾಸ್‌ಪೋರ್ಟ್ ರದ್ದು ಹೇಗೆ!?
ಭಾರತೀಯ ವಿದೇಶಾಂಗ ಇಲಾಖೆಯಡಿ ಬರುವ ಪಾಸ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾವು ಎಸ್‌ಐಟಿ ಕಳಿಸಿರುವ ದಾಖಲೆಗಳನ್ನು ದೃಢೀಕರಣಕ್ಕಾಗಿ ಕೇಂದ್ರ ಗೃಹ ಇಲಾಖೆಗೆ ರವಾನಿಸಲಿದೆ.
ಕೇಂದ್ರ ಗೃಹ ಇಲಾಖೆಯು ಇದನ್ನು ಪರಿಶೀಲಿಸಿ ಒಪ್ಪಿಗೆ ಕೊಟ್ಟ ಬಳಿಕ ಭಾರತೀಯ ವಿದೇಶಾಂಗ ಇಲಾಖೆಗೆ ಪ್ರಜ್ವಲ್ ಪಾಸ್‌ಪೋರ್ಟ್ ಅನ್ನು ರದ್ದು ಮಾಡುವ ಅಧಿಕಾರವಿದೆ. ಪಾಸ್‌ಪೋರ್ಟ್ ರದ್ದಾದ ಕೂಡಲೇ ಎಲ್ಲ ದೇಶಗಳ ಇಮಿಗ್ರೇಷನ್‌ಗೆ ಈ ಮಾಹಿತಿ ರವಾನೆಯಾಗಲಿದೆ.
ಪಾಸ್‌ಪೋರ್ಟ್ ರದ್ದಾದರೆ ಪ್ರಜ್ವಲ್ ಬಂಧನ ಹೇಗೆ!?
ಪಾಸ್‌ಪೋರ್ಟ್ ರದ್ದಾದರೆ ಮೊದಲು ಆರೋಪಿ ಯಾವ ದೇಶದಲ್ಲಿದ್ದಾನೆ ಎಂಬುದರ ಮಾಹಿತಿ ಸಂಗ್ರಹಿಸಿ ಆ ದೇಶಕ್ಕೆ ಪ್ರಜ್ವಲ್ ವಿರುದ್ಧದ ಪ್ರಕರಣದ ಸಮೇತ ಮಾಹಿತಿ ನೀಡಬೇಕು. ಆ ದೇಶದ ಜೊತೆಗೆ ಭಾರತವು ಪರಸ್ಪರ ಕಾನೂನು ನೆರವು ಒಪ್ಪಂದ ಪಡೆದಿರಬೇಕು. ಅನಂತರ ಆರೋಪಿ ತಲೆಮರೆಸಿಕೊಂಡಿರುವ ದೇಶವು ಆತನನ್ನು ವಶಕ್ಕೆ ಪಡೆದು ಭಾರತದ ವಿದೇಶಾಂಗ ಇಲಾಖೆಗೆ ಮಾಹಿತಿ ಕೊಡುತ್ತದೆ. ಬಳಿಕ ಪ್ರಕರಣದ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಅನುಮತಿ ಪಡೆದು, ತನಿಖಾಧಿಕಾರಿಗಳ ತಂಡ ವಿದೇಶಿ ಅಧಿಕಾರಿಗಳಿಂದ ಪ್ರಜ್ವಲ್ ಅವರನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬಹುದು. ಮತ್ತೊಂದೆಡೆ ಆ ದೇಶವೇ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿ ಪ್ರಜ್ವಲ್ ಅವರನ್ನು ವಿಮಾನದಲ್ಲಿ ಭಾರತಕ್ಕೆ ಕಳುಹಿಸಿಕೊಡಲೂ ಅವಕಾಶಗಳಿವೆ.


























