ಲೋಕಸಭಾ ಚುನಾವಣೆ ಫಲಿತಾಂಶದ ನಂತರ ತಾಲೂಕು, ಜಿಲ್ಲಾ ಪಂಚಾಯಿತಿಗಳ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ನಡೆಯಲಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಲೋಕಸಭಾ ಚುನಾವಣೆ ಫಲಿತಾಂಶ(ಜೂನ್ 4) ಪ್ರಕಟವಾದ ಬಳಿಕ ಆದಷ್ಟು ಬೇಗ ನಡೆಸುತ್ತೇವೆ. ಸರ್ಕಾರ ಚುನಾವಣೆ ನಡೆಸಲು ಸಿದ್ಧವಾಗಿದೆ ಎಂದಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ತಾಲ್ಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಕೂಡ ನಡೆಸಲಾಗುವುದು. ಸರ್ಕಾರ ಚುನಾವಣೆ ನಡೆಸಲು ಸಿದ್ಧವಿದೆ. ಕ್ಷೇತ್ರ ಪುನರ್ವಿಗಂಡಣೆಗೆ ಜನವರಿವರೆಗೆ ಗಡುವು ಇದ್ದು, ಈ ಬಗ್ಗೆ ಅಡ್ವೋಕೇಟ್ ಜನರಲ್ ಜೊತೆ ಚರ್ಚೆ ಮಾಡಿ ಅವರು ಕಾನೂನು ಪ್ರಕಾರ ಏನು ಮಾಡಬೇಕೆಂದು ಹೇಳುತ್ತಾರೋ ಹಾಗೆ ಮಾಡುತ್ತೇವೆ. ಪುನರ್ ವಿಂಗಡಣೆಯಾದ ಮೇಲೆ ಮೀಸಲಾತಿ ಮಾಡಲೇಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರ ಬಂದ ವರ್ಷದ ಆಗಿದ್ದು, ಇದೀಗ ಜೂನ್ 4ರಂದು ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಚುನಾವಣೆಗಳನ್ನು ನಡೆಸಲು ಮುಂದಾಗಿದೆ. ಆದ್ರೆ, ಅದ್ಯಾವಾಗ ನಡೆಸುತ್ತಾರೋ ಗೊತ್ತಿಲ್ಲ. ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಸಂಬಂಧ ಪ್ರಕರಣಗಳು ಕೋರ್ಟ್ನಲ್ಲಿ ಇರುವುದರಿಂದ ಇನ್ನಷ್ಟು ತಿಂಗಳು ವಿಳಂಬವಾಗುವ ಸಾಧ್ಯತೆಗಳು ಇವೆ. ಒಂದು ವೇಳೆ ಸರ್ಕಾರ ಈ ಬಗ್ಗೆ ಮುತುವರ್ಜಿ ವಹಿಸಿ ಕೋರ್ಟ್ ಕಾನೂನು ಪ್ರಕ್ರಿಯೆ ಮುಗಿಸುವುದರ ಜೊತೆಗೆ ಮೀಸಲಾತಿ ನಿಗದಿಪಡಿಸಿದರೆ ಮುಂದಿನ ಒಂದೆರೆಡು ತಿಂಗಳಲ್ಲೇ ಚುನಾವಣೆ ನಡೆಸಬಹುದು.
ಇದೀಗ ಸಿದ್ದರಾಮಯ್ಯ ಅವರು ಚುನಾವಣೆ ನಡೆಸುವ ಬಗ್ಗೆ ಮಾತನಾಡಿದ್ದು, ಜಿಲ್ಲಾ ಅಥವಾ ತಾಲೂಕು ಪಂಚಾಯಿತಿ ಚುನಾವಣೆಗೆ ನಿಲ್ಲಬೇಕು ಎಂದು ಕಾದು ಕುಳಿತಿರುವ ಸ್ಥಳೀಯ ರಾಜಕೀಯ ಮುಖಂಡರು ಸಂತಸಗೊಂಡಿದ್ದಾರೆ.

























