ಉಡುಪಿ : ವಿಧಾನಪರಿಷತ್ ನ ಬಿಜೆಪಿ ಅಭ್ಯರ್ಥಿ ಹಾಗೂ ಬಂಡಾಯವಾಗಿ ನಿಂತಿರುವ ಮಾಜಿ ಶಾಸಕ ರಘುಪತಿ ಭಟ್ ನಡುವಿನ ವಾಗ್ದಾಳಿ ತೀವ್ರವಾಗಿದ್ದು, ರಘುಪತಿ ಭಟ್ ನಮ್ಮನ್ನು ಅವರ ಮನೆಯ ಗೇಟಲ್ಲಿ ನಿಲ್ಲಿಸಿ ವಾಪಾಸ್ಸು ಕಳುಹಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ನಾನು ರಘುಪತಿ ಭಟ್ ಗೆ ಮಿಸ್ ಕಾಲ್ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಮಿಸ್ ಕಾಲ್ ಕೊಟ್ಟಿರೋದು ಎಲ್ಲಿ ಅನ್ನೋದು ಇಂಪಾರ್ಟೆಂಟ್. ವಿಧಾನಪರಿಷತ್ ಸದಸ್ಯ ಅರುಣ್ ಜೊತೆ ರಘುಪತಿ ಭಟ್ ಅವರ ಹೊಸ ಮನೆಗೆ ಹೋಗಿದ್ದೆ. ಸೆಕ್ಯೂರಿಟಿ ಗಾರ್ಡ್ ಬಳಿ ಎಂಎಲ್ಸಿ ಅರುಣ್ ಬಂದಿದ್ದಾರೆ ಎಂದು ಹೇಳಿ ಕಳುಹಿಸಿದೆ. ಆದರೆ ಅವರು ಮನೆಯಲ್ಲಿ ಇಲ್ಲ ಎಂದು ಸೆಕ್ಯೂರಿಟಿ ಗಾರ್ಡ್ ಹೇಳಿದ್ದ. ಅವರಿಗೆ ಮಾಹಿತಿ ನೀಡಲು ಹೇಳಿದರು ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ. ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದರು.
ನಾನು ಕೂಡ ಅವರಿಗೆ ಎರಡು ಬಾರಿ ಕರೆ ಮಾಡಿದೆ. ಟಿಕೆಟ್ ಘೋಷಣೆ ಆದಾಗಲೂ ರಘುಪತಿ ಭಟ್ ಗೆ ಕರೆ ಮಾಡಿದ್ದೆ. ಎಂಎಲ್ಸಿ ಅರುಣ್ ಕರೆ ಮಾಡಿದಾಗಲೂ ಅವರು ಸ್ವೀಕರಿಸಿಲ್ಲ. ಸರ್ಜಿ ಸೌಜನ್ಯಕ್ಕೂ ಸಂಪರ್ಕ ಮಾಡಿಲ್ಲ ಎಂದು ಹೇಳುತ್ತಿದ್ದಾರೆ, ಮನೆಯ ಗೇಟಲ್ಲಿ ನಿಲ್ಲಿಸಿ ನಮ್ಮನ್ನು ವಾಪಸ್ಸು ಕಳುಹಿಸಿದರು. ಇದೊಂದು ವಿಪರ್ಯಾಸದ ಸಂಗತಿ ಎಂದರು.
ಬಿಜೆಪಿ ಸಂಘಟನೆಯ ಶಕ್ತಿ ಇರುವ ಪಕ್ಷ, ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ., ಶಕ್ತಿ ಇರುವುದು ನಮ್ಮ ಕಾರ್ಯಕರ್ತರಲ್ಲಿ ಎಂದರು.