ಕೋಲ್ಕತ್ತಾ : ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ರೆಮಲ್ ಚಂಡಮಾರುತದ ಎಫೆಕ್ಟ್ ಜೋರಾಗಿದೆ. ಮಧ್ಯರಾತ್ರಿ ಅಪ್ಪಳಿಸಿದ ಸೈಕ್ಲೋನ್‌ಗೆ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ.
ಈ ಅವಧಿಯಲ್ಲಿ ಸಮುದ್ರದಲ್ಲಿ ಚಂಡಮಾರುತದ ಗರಿಷ್ಠ ವೇಗ ಗಂಟೆಗೆ 135 ಕಿ.ಮೀ ಆಗಿದೆ. ಇದರ ಪರಿಣಾಮದಿಂದ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಸೈಕ್ಲೋನಿಕ್ ಚಂಡಮಾರುತವು ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ ತಕ್ಷಣ, ಬಿರ್ಭುಮ್, ನಾಡಿಯಾ, ಪೂರ್ವ ಬರ್ಧಮಾನ್, ಬಂಕುರಾ, ಪೂರ್ವ ಮೇದಿನಿಪುರ, ಉತ್ತರ 24 ಪರಗಣಗಳು, ದಕ್ಷಿಣ 24 ಪರಗಣಗಳು, ಕೋಲ್ಕತ್ತಾ, ಬಿಧಾನನಗರದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಪ್ರಾರಂಭವಾಯಿತು.
ಪಶ್ಚಿಮ ಬಂಗಾಳದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆ ಮತ್ತು ಗಾಳಿಯಿಂದಾಗಿ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಹಲವೆಡೆ ಜೋರು ಗಾಳಿಗೆ ಮರಗಳು ಧರೆಗುರುಳಿದ್ದು, ಎಲ್ಲೆಂದರಲ್ಲಿ ಬಿದ್ದಿವೆ. ಈ ಹಿನ್ನೆಲೆಯಲ್ಲಿ ರೈಲು, ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ ಪರಿಸ್ಥಿತಿ ಹದಗೆಡುವ ಎಚ್ಚರಿಕೆಯನ್ನು ಐಎಂಡಿ ನೀಡಿದೆ.
ರೆಮಲ್ ಚಂಡಮಾರುತದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಏಜೆನ್ಸಿಗಳಿಗೆ ಯುದ್ಧೋಪಾದಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಬಂಗಾಳದ ಗವರ್ನರ್ ಸಿವಿ ಆನಂದ್ ಬೋಸ್ ಕೂಡ ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.