ಮೂಡುಬಿದಿರೆ : ಸೌದಿ ಅರೇಬಿಯಾದ ದಮಾಮ್‌ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೂಡುಬಿದಿರೆ ಮೂಲದ ದಂಪತಿಯ ಮಗುವೊಂದು ಮೃತಪಟ್ಟಿದ್ದು ಮೂವರು ತೀವ್ರ ಅಸ್ವಸ್ಥರಾಗಿದ್ದಾರೆ.
ಮೂಡುಬಿದಿರೆಯ ಕೋಟೆಬಾಗಿಲು ಖೀಲಾ ಸುನ್ನಿ ಜಾಮಿಯಾ ಮಸೀದಿ ಎದುರಿನ ಮನೆಯ ಶೇಖ್ ಫಹಾದ್ ಮತ್ತು ಅವರ ಕುಟುಂಬ ದಮಾಮ್‌ನ ಅದಮಾ ಎಂಬಲ್ಲಿಯ ಲುಲು ಮಾಲ್ ಹಿಂಭಾಗದಲ್ಲಿರುವ ಅಲ್ ಹುಸೇನಿ ಕಾಂಪೌಂಡ್‌ನಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ ಅವರು ಮಲಗಿದ್ದ ವೇಳೆ ಅಗ್ನಿ ಆಕಸ್ಮಿಕ ಸಂಭವಿಸಿದೆ. ಫಹದ್ ಅವರ ಮಗು ಸಾಯಿಕ್ ಶೇಖ್ (2) ಉಸಿರುಗಟ್ಟಿ ಮೃತಪಟ್ಟಿದೆ.
ಫಹದ್, ಅವರ ಪತ್ನಿ ಸಲ್ಮಾ ಕಾಝಿ ಮತ್ತು ಪುತ್ರ ಶಾಹಿದ್ ಶೇಖ್(6) ಹೊಗೆಯಿಂದ ಉಸಿರುಗಟ್ಟಿ ತೀವ್ರವಾಗಿ ಅಸ್ವಸ್ಥರಾಗಿದ್ದು, ಅವರನ್ನು ಸಮೀಪದ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಹಿತಿ ಪ್ರಕಾರ ಮನೆಯೊಳಗಿದ್ದ ರೆಫ್ರಿಜರೇಟರ್‌ನಿಂದ ಅನಿಲ ಸೋರಿಕೆಯಾಗಿದೆ ಎನ್ನಲಾಗಿದ್ದು, ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಹತ್ತಿರದ ಮನೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಮೂಡುಬಿದಿರೆ ಪೇಟೆಯಲ್ಲಿ ಪಾದರಕ್ಷೆ ಮಳಿಗೆ ಹೊಂದಿದ್ದ ಕೋಟೆಬಾಗಿಲಿನ ಸಮದ್ ಅವರ ಪುತ್ರ ಶೇಖ್ ಫಹಾದ್ ಬಹಳ ವರ್ಷಗಳ ಹಿಂದೆಯೇ ವಿದೇಶಕ್ಕೆ ತೆರಳಿದ್ದು, ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಫಹಾದ್ ಕುಟುಂಬವು ಕಳೆದ ಆರು ತಿಂಗಳಿನಿಂದ ಈ ಕಟ್ಟಡದಲ್ಲಿ ವಾಸವಾಗಿದೆ.