ಮಂಗಳೂರು : ಬಸ್ಸೆಂದರೆ ವಾಹನಗಳಲ್ಲಿ ದೊಡ್ಡಣ್ಣ, ಹಾಗಾಗಿ ಸಣ್ಣ ವಾಹನಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಿರಿ. ನ್ಯಾಯಸಂಹಿತೆಯಲ್ಲಿ ಮುಂದಿನ ತಿಂಗಳಿನಿಂದ ಬದಲಾವಣೆಗಳು ಆಗಲಿದೆ. ಸಂಚಾರ ನಿಯಮ ಉಲ್ಲಂಘನೆಗಳ ಶಿಕ್ಷೆಯ ಪ್ರಮಾಣ ಮತ್ತು ದಂಡದ ಪ್ರಮಾಣ ಹೆಚ್ಚಾಗಲಿದೆ ಎಂದು ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ.ಪಿ. ದಿನೇಶ್ ಕುಮಾರ್
ಹೇಳಿದರು.

ದ.ಕ ಬಸ್ ಮಾಲಕರ ಸಂಘ, ಕೆನರಾ ಬಸ್ಸು ಮಾಲಕರ ಸಂಘ ಹಾಗೂ ಸೈಂಟ್ ಅಲೋಶಿಯಸ್ ಕಾಲೇಜು(ಪರಿಗಣಿತ ವಿಶ್ವವಿದ್ಯಾನಿಲಯ) ಇದರ ಸಂಯುಕ್ತ ಆಶ್ರಯದಲ್ಲಿ ಬಸ್ಸು ಚಾಲಕರ – ನಿರ್ವಾಹಕರ ಮಾಹಿತಿ ಕಾರ್ಯಗಾರ 2024ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಮಥಾಯಸ್ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ಮಂಗಳೂರು ನಗರದ ರಸ್ತೆಯನ್ನು ಅಪಘಾತ ರಹಿತ ರಸ್ತೆ ಮಾಡಲು ಇಲಾಖೆ ಪಣ ತೊಟ್ಟಿದೆ. ಅದರ ಭಾಗವಾಗಿ ಕಾರ್ಯಗಾರ ನಡೆಸಲು ಸೂಚಿಸಲಾಗಿದೆ. 80 ವರ್ಷಗಳ ಇತಿಹಾಸದ ಖಾಸಗಿ ಬಸ್ಸಿನ ವ್ಯವಸ್ಥೆ ಮಂಗಳೂರಿನಲ್ಲಿದೆ. ರಸ್ತೆಗಳು ಹಾಗೇ ಇದ್ದರೂ ವಾಹನಗಳ ಸಂಖ್ಯೆ ದುಪ್ಪಟ್ಟಾಗಿವೆ. ಬಸ್ ಚಾಲಕರು ನಿಯಮಗಳ ಪಾಲನೆ ಮಾಡುವಲ್ಲಿ ಹಿಂದೇಟು ಹಾಕುವುದರಿಂದ ಕಾರ್ಯಗಾರಗಳು ಅನಿವಾರ್ಯವಾಗಿದೆ. ಪೊಲೀಸರು ದಂಡ ವಿಧಿಸಿದರೂ ನಿಯಮ ಉಲ್ಲಂಘನೆಗಳು ನಿಂತಿಲ್ಲ. ತಾಳ್ಮೆ ಅನ್ನುವುದು ಚಾಲಕರಲ್ಲಿ ಇಲ್ಲದಂತಾಗಿದೆ. ನಗರ ಸುರಕ್ಷಿತವಾಗಿದೆ ಅನ್ನುವ ಮನೋಭಾವ ಜನರಲ್ಲಿ ಮೂಡುವಂತಾಗಲು ಕಾರ್ಯಾಗಾರದಲ್ಲಿ ಸಿಗುವ ಮಾಹಿತಿಯನ್ನು ಕರ್ತವ್ಯದಲ್ಲಿ ಅಳವಡಿಸಿಕೊಳ್ಳಿರಿ. ನ್ಯಾಯ ಸಂಹಿತೆಯಲ್ಲಿ ಬದಲಾವಣೆಗಳಾಗಿದ್ದು, ಐಪಿಸಿ ಬದಲಾಗಿ ಬಿಎನ್ ಎಸ್ ನ್ಯಾಯಸಂಹಿತೆ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದ್ದು, ಶಿಕ್ಷೆಯ ಪ್ರಮಾಣ ಹೆಚ್ಚಾಗಲಿದೆ.
ನಿರ್ಲಕ್ಷ್ಯತನದ ಚಾಲನೆ ಐಪಿಸಿ 279 ಬದಲಾಗಿ ಬಿಎನ್ ಎಸ್ ಕಾಯಿದೆಯಡಿ 281, 6 ತಿಂಗಳ ಕಾರಾಗೃಹದಿಂದ 5,000 ದಂಡ, 3 ವರ್ಷ ಕಾರಾಗೃಹದಿಂದ 10,000 ದಂಡಕ್ಕೆ ಏರಿಕೆ, ಸಾಮಾನ್ಯ ಗಾಯ 337 ಐಪಿಸಿ ಬದಲಾಗಿ ಬಿಎನ್ ಎಸ್ 125 A, 125B, ಮರಣ ಸಂಭವಿಸಿದಾಗ 304 A ಬದಲು 106 BNS,ಎರಡು ವರ್ಷಗಳಿದ್ದ ಶಿಕ್ಷೆಯ ಪ್ರಮಾಣ 5 ವರ್ಷಕ್ಕೆ ಏರಿಕೆ, ಅಪಘಾತದ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸದೇ ಇದ್ದಲ್ಲಿ 134, 134A, 134B, ಅಪಘಾತದ ಮಾಹಿತಿ ಪೊಲೀಸ್ ಠಾಣೆಗೆ ನೀಡದೇ ಇರುವುದು, ಹಿಟ್ ಆಂಡ್ ರನ್ ಪ್ರಕರಣಗಳಿಗೆ 106(2) ಬಿಎನ್ ಎಸ್ ಕಾಯಿದೆಗಳಡಿ ಪ್ರಕರಣಗಳು ದಾಖಲಾಗಲಿದೆ.

ರೇಸಿಂಗ್, ಮದ್ಯಸೇವಿಸಿ ಚಾಲನೆ, ಮೊಬೈಲ್ ಫೋನ್ ಬಳಕೆ, ಓವರ್ ಟೇಕ್, ರೆಡ್ ಲೈಟ್ ಉಲ್ಲಂಘನೆ, ಒನ್ ವೆ ಚಾಲನೆ, ರೇಸಿಂಗ್ ಪ್ರಕರಣಗಳಲ್ಲಿ ಚಾಲಕನ ಚಾಲನ ಪರವಾನಗಿ ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು. ಮುಂದೆ ಎಲ್ಲಾ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಕೆ ಆಗುವುದರಿಂದ ಹೆಲ್ಮೆಟ್, ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಹಾಕದಿರುವುದನ್ನೂ ಪತ್ತೆಹಚ್ಚಲಾಗುವುದು. ಬಸ್ಸುಗಳ ನಿರ್ವಾಹಕರು ಟಿಕೇಟು ನೀಡದೆ ನಿಮ್ಮ ಮೇಲಿನ ವಿಶ್ವಾಸ ಕಳೆದುಕೊಳ್ಳಬೇಡಿ. ಕರ್ಕಷ ಹಾರ್ನ್ ಗಳ ಕುರಿತು ಜಾಗೃತಿ ವಹಿಸಿದ್ದರೂ, ಮುಂಬೈ, ಬೆಂಗಳೂರು ದೂರದೂರಿಗೆ ತೆರಳುವ ಬಸ್ಸುಗಳ ಹಾರ್ನ್ ಕುರಿತು ವ್ಯಾಪಕ ದೂರುಗಳು ಬರುತ್ತಿವೆ. ಸ್ವಶಿಸ್ತು ಕಾಪಾಡುವ ಮೂಲಕ ಸಾರ್ವಜನಿಕರ ಜವಾಬ್ದಾರಿಯನ್ನು ನಿರ್ವಹಿಸಿ ಬಸ್ ನಿಲ್ದಾಣಕ್ಕೇ ಬಸ್ಸುಗಳ ಕೊಂಡೊಯ್ಯಿರಿ. ಮೀಸಲು ಸೀಟುಗಳಲ್ಲಿ ಅವರಿಗೇ ಅವಕಾಶ ಕಲ್ಪಿಸಿರಿ. ಸಂಘ ಹೊರಡಿಸಿರುವ ಭಿತ್ತಿಪತ್ರದಲ್ಲಿ ಅವಶ್ಯಕ ಮಾಹಿತಿಗಳಿದ್ದು, ಎಲ್ಲರೂ ಪಾಲಿಸಿರಿ ಎಂದರು.

ಸೈಂಟ್ ಅಲೋಶಿಯಸ್ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಆಲ್ವಿನ್ ಡೇಸಾ, ಸಹಾಯಕ ಪೊಲೀಸ್ ಆಯುಕ್ತ ನಜ್ಞಾ ಫಾರೂಕಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ನಾಡ್, ಉಪನ್ಯಾಸಕ, ರಾಷ್ಟ್ರಮಟ್ಟದ ತರಬೇತುದಾರ ರಾಜೇಂದ್ರ ಭಟ್, ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಜೀವಂದರ್ ಅಧಿಕಾರಿ ಉಪಸ್ಥಿತರಿದ್ದರು. ಅಧ್ಯಕ್ಷ ಅಝೀಝ್ ಪರ್ತಿಪಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ರಾಮಚಂದ್ರ ಪಿಲಾರ್ ವಂದಿಸಿದರು. ಆರ್.ಜೆ ಅಭಿಷೇಕ್ ಶೆಟ್ಟಿ ನಿರೂಪಿಸಿದರು.
ಕೊಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು. ಸಂಚಾರಿ ಠಾಣೆಯ ಠಾಣಾಧಿಕಾರಿಗಳಾದ ಆನಂದ್, ಉರಗಪ್ಪ, ದೀಪಕ್, ಕೃಷ್ಣಾನಂದ ನಾಯಕ್ ಭಾಗವಹಿಸಿದ್ದರು.

ನಗರದ ಖಾಸಗಿ ಬಸ್ಸುಗಳಲ್ಲಿ ಟೈಮಿಂಗ್ ವಿಚಾರದ ಕುರಿತು ಪರಿಷ್ಕರಣೆ ಅಗತ್ಯ ಆಗಬೇಕಿದೆ. ಸಂಘ ಈ ಕುರಿತು ಹೆಚ್ಚಿನ ಒಲವು ತೋರಿಸಬೇಕಿದೆ. ಮಂಗಳೂರು ನಗರದಲ್ಲಿ 386 ಸಿಟಿ ಹಾಗೂ 566 ಸರ್ವಿಸ್ ಬಸ್ಸುಗಳು ಸಂಚರಿಸುತ್ತಿವೆ. ಈ ಪೈಕಿ ಇತ್ತೀಚೆಗೆ 236 ಕರ್ಕಷ ಹಾರನ್ ತೆಗೆದು ಪ್ರಕರಣ ದಾಖಲಿಸಲಾಗಿದೆ. ಆದರೂ ದೂರುಗಳು ನಿರಂತರವಾಗಿ ಬರುತ್ತಲೇ ಇದೆ. ಕಂಪ್ಯೂಟರೈಸ್ಡ್ ಟಿಕೇಟ್ ಯಂತ್ರವನ್ನು ಕಡ್ಡಾಯವಾಗಿ ಬಳಸಿ, ಕಡ್ಡಾಯ ಟಿಕೇಟನ್ನು ಪ್ರಯಾಣಿಕರಿಗೆ ನೀಡಿ. ಪ್ರಯಾಣಿಕರೊಂದಿಗೆ ಸಭ್ಯತೆಯಿಂದ ವರ್ತಿಸಿರಿ, ಮಹಿಳಾ ಪ್ರಯಾಣಿಕರನ್ನು ಬಸ್ಸೊಳಗಡೆ ಹತ್ತಿಸುವಾಗ ತಾಳ್ಮೆಯಿಂದ ವರ್ತಿಸಿರಿ, ಡೊರ್ ಗಳನ್ನು ಕಡ್ಡಾಯವಾಗಿ ಹಾಕಬೇಕು. – ಸಹಾಯಕ ಪೊಲೀಸ್ ಆಯುಕ್ತ ನಜ್ಞಾ ಫಾರೂಕಿ
ಟೈಮಿಂಗ್ ಸ್ಪರ್ಧೆಯಿಂದ ಚಾಲಕರಲ್ಲಿ ಒತ್ತಡಗಳು ಹೆಚ್ಚಾಗಿ 40ರ ವಯಸ್ಸಿನಲ್ಲಿ ಬಿಪಿ, ಶುಗರ್ ನಿಂದ ಬಳಲಿ ಆರೋಗ್ಯ ಕಳೆದುಕೊಳ್ಳುವಂತಾಗಿದೆ. ಬಸ್ಸೊಳಗಡೆ ದೇವರ ಫೋಟೊಗಳ ಬದಲು ಚಾಲಕರ ಕುಟುಂಬದ ಫೋಟೊಗಳಿರಿಸಿದರೆ ವೇಗ ತನ್ನಷ್ಟಕ್ಕೆ ಕಡಿಮೆಯಾಗುವುದು. ಬಸ್ಸಲ್ಲಿ ಸ್ಕ್ಯಾನರ್ ವ್ಯವಸ್ಥೆ ಮಾಡಿದಲ್ಲಿ ಚಿಲ್ಲರೆ ವ್ಯವಸ್ಥೆ, ಒತ್ತಡಗಳು ಕಡಿಮೆಯಾಗುವುದು. ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಗಲಾಟೆ ಮಾಡಿದರೆ., ಕನ್ನಡಿ ನೋಡಿ ತಲೆ ಬಾಚಿದರೆ, ಬಸ್ ನಿಲ್ದಾಣಗಳಲ್ಲಿ ಅವಾಚ್ಯ ಶಬ್ದಗಳೊಂದಿಗೆ ಬೈಯ್ದಾಡಿದರೆ ಪ್ರಯಾಣಿಕರಲ್ಲಿ ಆತಂಕಗಳು ಹೆಚ್ಚಾಗುತ್ತದೆ. ಒಂದು ನಿಮಿಷದ ಗಲಾಟೆಯಿಂದ ವಿಶ್ವಾಸ- ಸ್ನೇಹ ಕಳೆದುಕೊಳ್ಳದಿರಿ.
ಅಜೆಕಾರು – ಕಾರ್ಕಳ ನಡುವಿನ ಬಸ್ ನಿರ್ವಾಹಕರಿಗೆ ಭಾವಪೂರ್ವಕ ವಿದಾಯವನ್ನು ನಿತ್ಯ ಪ್ರಯಾಣಿಕರು ನಿವೃತ್ತಿ ಸಮಯದಲ್ಲಿ ಅಭಿನಂದನೆ ಮೂಲಕ ಸಲ್ಲಿಸಿದರು. ಇದು ನಿರ್ವಾಹಕ ಪ್ರಯಾಣಿಕರ ಜೊತೆಗೆ ಇಟ್ಟುಕೊಂಡ ಸ್ನೇಹಮಯ ಸಂಬಂಧದಿಂದ ಸಾಧ್ಯವಾಯಿತು. ಇಂತಹ ನಿರ್ವಾಹಕರಿಂದ ಮಾಲೀಕರಿಗೆ ಲಾಭವನ್ನು ತಂದುಕೊಟ್ಟಿದೆ. ನಿರ್ವಾಹಕನ ಉತ್ತಮ ಮಾತುಗಳಿಂದ, ನಗುಮುಖದ ಸೇವೆಯಿಂದ ಉದ್ದಿಮೆ ಆರೋಗ್ಯಯುತವಾಗಿ, ಸ್ನೇಹದಿಂದ ಮುಂದುವರಿಯುವುದು. ಶೇ.80 ಪ್ರಯಾಣಿಕರು ಪ್ರಯಾಣದ ಸಂದರ್ಭ ಮೌನ ಬಯಸುತ್ತಾರೆ. ಟೇಪ್ ರೆಕಾರ್ಡರ್ ಗೆ ಅವಕಾಶ ಕಲ್ಪಿಸಿಕೊಡದಿರಿ.. – ಉಪನ್ಯಾಸಕ, ರಾಷ್ಟ್ರಮಟ್ಟದ ತರಬೇತುದಾರ ರಾಜೇಂದ್ರ ಭಟ್