ಧರ್ಮಸ್ಥಳ : ಆಸ್ಪತ್ರೆಗೆ ಅಕ್ರಮ ಪ್ರವೇಶ ಮಾಡಿದ ಇಬ್ಬರು ಸೀಲ್ ಕಳವು ಮಾಡಿದ್ದು, ಸಂಸ್ಥೆಯ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಕಕ್ಕಿಂಜೆ ಸೈಂಟ್ ಜೋಸೆಫ್ ಆಸ್ಪತ್ರೆಯ ಡೈರೆಕ್ಟರ್ ಫಾ. ಯೋಹನನ್ ಕೆ.ಜೆ. ರವರು ನೀಡಿರುವ ದೂರಿನ ಮೇರೆಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ.22 ರಂದು ಸಂಜೆ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಎಂಬಲ್ಲಿರುವ, ಸೈಂಟ್ ಜೋಸೆಫ್ ಆಸ್ಪತ್ರೆಯಲ್ಲಿ, ಇಬ್ಬರು ಯುವಕರು ಆಸ್ಪತ್ರೆಯ ಗೇಟಿನ ಮೂಲಕ ಒಳ ಬಂದು ಆಸ್ಪತ್ರೆಯ ಒಳ ಹೋಗಲು ಪ್ರಯತ್ನಿಸಿದ್ದು, ಈ ವೇಳೆ ಫಾ.ಟೋಮ್ ಎಂಬವರು ಅವರನ್ನು ಪ್ರಶ್ನಿಸಿದ್ದು, ಸ್ವಲ್ಪ ಸಮಯದ ಬಳಿಕ ಅದೇ ಯುವಕರು ಯಾರಿಗೂ ತಿಳಿಯದಂತೆ, ಆಸ್ಪತ್ರೆಯ ಹಿಂಭಾಗಕ್ಕೆ ಹೋಗಿ ಅಲ್ಲಿ ಇರಿಸಿದ್ದ ಏಣಿಯ ಮೂಲಕ ಒಂದನೇ ಮಹಡಿಗೆ ಹೋಗಿ ಸ್ಟೇರ್ ಕೇಸ್ ಮೂಲಕ ಕಂಪ್ಯೂಟರ್ ರೂಮಿಗೆ ಹೋಗಿ ಅಲ್ಲಿದ್ದ ಆಸ್ಪತ್ರೆಗೆ ಸಂಬಂಧಿಸಿದ ಎರಡು ಸೀಲ್ ಗಳನ್ನು ಕಳುವು ಮಾಡಿಕೊಂಡು ಹೋಗಿದ್ದು, 2 ಸೀಲ್ ಗಳ ಒಟ್ಟು ಮೌಲ್ಯ 600/- ರೂ ಆಗಬಹುದು, ಇಬ್ಬರು ಆಸ್ಪತ್ರೆಯಿಂದ ಹೋಗುವಾಗ ಸಂಸ್ಥೆಯ ಸಿಬ್ಬಂದಿಗಳಿಗೆ ಕೊಲೆ ಬೆದರಿಕೆಯನ್ನು ಕೂಡ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ, ಅ ಕ್ರ 44/2024 ಕಲಂ:454,380,506 ಜೊತೆಗೆ 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























