ಮಂಗಳೂರು : ಕಂಕನಾಡಿಯ ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಮಾಡಿ ವಾಹನ ಹಾಗೂ ಜನ ಸಂಚಾರಕ್ಕೆ ಅಡ್ಡಿಪಡಿಸಿದ್ದು, ಈ ಬಗ್ಗೆ ಪ್ರಶ್ನಿಸಿದ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆಯನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಖಂಡಿಸಿದ್ದಾರೆ.
ಜನ ಸಂಚಾರಕ್ಕೆ ತೊಂದರೆ ಮಾಡಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕದ್ರಿ ಠಾಣಾ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದರು. ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣ ಮಾಡುವ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಮೇಲೆ ಒತ್ತಡವನ್ನು ಹಾಕಿ ಕೇಸನ್ನು ಹಿಂಪಡೆದುಕೊಂಡಿರುವುದು ದುರಂತವೇ ಸರಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಮೋಟೊ ಪ್ರಕರಣವನ್ನು ದಾಖಲಿಸಿದ ಪೊಲೀಸ್ ಅಧಿಕಾರಿಯನ್ನು ರಜೆಯಲ್ಲಿ ಕಳುಹಿಸುವ ಮೂಲಕ ಪೊಲೀಸರ ಮನೋಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ನಮಾಜ್ ಘಟನೆಯನ್ನು ಪ್ರಶ್ನಿಸಿದ ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣವನ್ನು ದಾಖಲಿಸಿ ಅಲ್ಪಸಂಖ್ಯಾತರನ್ನು ಖುಷಿಪಡಿಸಿ ತನ್ನ ವೋಟ್ ಬ್ಯಾಂಕ್ ನ್ನು ಗಟ್ಟಿಗೊಳಿಸಲು ಕಾಂಗ್ರೆಸ್ ಹೊರಟಂತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಪೋಲಿಸ್ ಇಲಾಖೆಗೆ ಸ್ವತಂತ್ರ ಇಲ್ಲದಾಗಿದೆ. ಪೊಲೀಸರು ಯಾವುದೇ ಕೆಲಸವನ್ನು ಮಾಡಬೇಕಿದ್ದರೂ ಕಾಂಗ್ರೆಸ್ ಸರಕಾರದ ಅನುಮತಿಯನ್ನು ಪಡೆದು ಮಾಡಬೇಕು ಎನ್ನುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಈ ರೀತಿಯ ಬೆಳವಣಿಗೆಯಿಂದ ರಾಜ್ಯದಲ್ಲಿ ಅಶಾಂತಿ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.