ಬೆಳಗಾವಿ : ಜಾತಿ-ಧರ್ಮಗಳ ವಿಚಾರಗಳಿಂದಾಗಿ ಇತ್ತೀಚೆಗೆ ಅಲ್ಲಲ್ಲಿ ಗಲಾಟೆ ಸೇರಿದಂತೆ ಒಂದು ರೀತಿಯ ಅಹಿತಕರ ಘಟನೆಗಳು ನಡೆಯುತ್ತಿವೆ. ಸಮಾಜದಲ್ಲಿನ ಇಂತಹ ವಿಷಮ ಪರಿಸ್ಥಿತಿಯಲ್ಲೂ ಬೆಳಗಾವಿಯಿಂದ ಒಂದೊಳ್ಳೆ ಸುದ್ದಿ ಬಂದಿದೆ.
ಹೆರಿಗೆ ನಂತರ ಪ್ರಜ್ಞೆತಪ್ಪಿದ್ದ ಹಿಂದೂ ಬಾಣಂತಿ ಹಾಗೂ ನವಜಾತ ಶಿಶುವನ್ನು ಮುಸ್ಲಿಂ ಕುಟುಂಬವೊಂದು ಪ್ರೀತಿಯಿಂದ ಆರೈಕೆ ಮಾಡಿದೆ. ಕಳೆದ ಏಪ್ರಿಲ್ 20ರಂದು ಶಾಂತವ್ವ ನಿಡಸೋಸಿ ಎಂಬುವವರಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದಂಡಾಪೂರ ಗ್ರಾಮದ ಬಾಣಂತಿಗೆ ಆಪರೇಷನ್ ಮೂಲಕ ಹೆರಿಗೆ ಮಾಡಲಾಗಿತ್ತು. ಹೆರಿಗೆ ನಂತರ ತೀವ್ರ ರಕ್ತಸ್ರಾವ ಉಂಟಾಗಿ ಬಾಣಂತಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆಗ ಪಕ್ಕದ ಬೆಡ್ನಲ್ಲಿದ್ದ ರೋಗಿಯ ಸಂಬಂಧಿ ಶಮಾ ದೇಸಾಯಿ ಆರೈಕೆ ಮಾಡಿದ್ದಾರೆ. ಹೆರಿಗೆಯಾದ ಬಾಣಂತಿ ಮಹಿಳೆಯ ಸಂಬಂಧಿಗಳು ಯಾರೂ ಇರದ ಹಿನ್ನೆಲೆಯಲ್ಲಿ ತಾಯಿ ಹಾಗೂ ಶಿಶುವನ್ನು ಮುಸ್ಲಿಂ ಕುಟುಂಬ ನೋಡಿಕೊಂಡಿದೆ.
ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಆರು ದಿನಗಳ ಕಾಲ ಬಾಣಂತಿ ಮಹಿಳೆ ಹಾಗೂ ಮಗುವಿನ ಆರೈಕೆ ಮಾಡಿದೆ. ಅಷ್ಟೇ ಅಲ್ಲ ಮಗುವನ್ನ ತಮ್ಮ ಮನೆಗೆ ಕರೆದೊಯ್ದು 40 ದಿನಗಳ ಕಾಲ ಆರೈಕೆ ಮಾಡಿದೆ. ತಾಯಿ ಸಂಪೂರ್ಣ ಚೇತರಿಸಿಕೊಂಡ ನಂತರ ಪೊಲೀಸರ ಸಮ್ಮುಖದಲ್ಲಿ ತಾಯಿ ಹಾಗೂ ಮಗುವನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೊಳ್ಳೆ ಮಾನವೀಯ ಕೆಲಸ ನಡೆದಿದೆ.


























