ತುಮಕೂರು : ಕಲ್ಪತರು ನಾಡು ತುಮಕೂರಿನಲ್ಲಿ ಬಿದ್ದಾ ಜಿದ್ದಿನ ಪೈಪೋಟಿಯಲ್ಲಿ ಕೊನೆಗೂ ವಿ.ಸೋಮಣ್ಣ ಅವರು ವಿಜಯ ಪತಾಕೆ ಹಾರಿಸಿದ್ದಾರೆ. ಇನ್ನೇನು ಅಧಿಕೃತವಾದ ಘೋಷಣೆಯೊಂದೇ ಬಾಕಿ ಇದೆ. ಈ ಮೂಲಕ ಹೊರಗಿನಿಂದ ಬಂದು ಕಲ್ಪತರು ನಾಡನ್ನು ಗೆದ್ದು ವಿ.ಸೋಮಣ್ಣ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ವಿ. ಸೋಮಣ್ಣ ಸ್ಪರ್ಧೆ ಮಾಡಿದ್ದರೇ, ಇತ್ತ ಕಾಂಗ್ರೆಸ್ನಿಂದ ಮಾಜಿ ಸಂಸದ ಮುದ್ದಹನುಮೇಗೌಡ ಕಣಕ್ಕಿಳಿದಿದ್ದರು. ಮತ ಎಣಿಕೆ ಆರಂಭದಿಂದ ಮುನ್ನಡೆ ಕಾಯ್ದುಕೊಂಡು ಬಂದ ವಿ.ಸೋಮಣ್ಣ ಅವರು ಕೊನೆಗೂ ಜಯಭೇರಿ ಬಾರಿಸಿದ್ದಾರೆ.
6,21,145 ಮತಗಳನ್ನು ಪಡೆಯುವ ಮೂಲಕ ಸೋಮಣ್ಣ 1,43,932 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ 4,77,213 ಮತಗಳು ಪಡೆದು ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ವಿ ಸೋಮಣ್ಣ ಅವರು ಸತತ 18ನೇ ಸುತ್ತಿನಲ್ಲೂ ಮುನ್ನಡೆಯನ್ನು ಕಾಯ್ದುಕೊಂಡು ಗೆಲುವಿನ ನಗೆ ಬೀರಿದ್ದಾರೆ. ಸದ್ಯ ಸೋಮಣ್ಣ ಗೆದ್ದಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.


























