ಬೀದರ್ : ಸಚಿವ ಈಶ್ವರ್ ಖಂಡ್ರೆ ಅವರ ಮಗ ಸಾಗರ್ ಖಂಡ್ರೆ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಅವರು ಬಿಜೆಪಿ ಹಾಲಿ ಸಂಸದ ಭಗವಂತ ಖೂಬಾಗೆ ಸೋಲಿನ ರುಚಿ ತೋರಿಸಿದ್ದಾರೆ. ಆ ಮೂಲಕ ದೇಶದ ಕಿರಿಯ ಸಂಸದ ಎಂಬ ಹೆಗ್ಗಳಿಗೂ ಪಾತ್ರರಾಗಿದ್ದಾರೆ. 26ನೇ ವಯಸ್ಸಿಗೆ ಸಾಗರ್ ಖಂಡ್ರೆ ಸಂಸತ್ ಪ್ರವೇಶಿಸಿದ್ದಾರೆ.
ಸಂಸದ ಸಾಗರ ಖಂಡ್ರೆ ಬೀದರ್ ಕ್ಷೇತ್ರದಲ್ಲಿ ಗೆಲ್ಲುವ ಮುಖಾಂತರ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ. ಕ್ಷೇತ್ರವನ್ನು ಮರಳಿ ಕೈ ವಶವಾಗಿದೆ.
ಸಾಗರ ಖಂಡ್ರೆ ಅವರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಪ್ರತಿಸ್ಪರ್ಧಿಯಾಗಿದ್ದರು. ಭಗವಂತ ಖೂಬಾ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೆ ಆದ ಪ್ರಭಾವ ಹೊಂದಿದ್ದಾರೆ. ಇವರ ವಿರುದ್ಧ ಸ್ವತಃ ಸಂಸದ ಸಾಗರ ಖಂಡ್ರೆ ತಂದೆ ಈಶ್ವರ ಖಂಡ್ರೆ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. 26 ವರ್ಷದ ತರುಣ ಸಾಗರ ಖಂಡ್ರೆ ಬಿಜೆಪಿಯ ಘಟಾನುಘಟಿ ನಾಯಕ ಭಗವಂತ ಖೂಬಾ ಅವರನ್ನು 1.28 ಲಕ್ಷ ಮತಗಳ ಅಂತರದಿಂದ ಸೋಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಯಾರು ಈ ಸಾಗರ ಖಂಡ್ರೆ
ವೀರಶೈವ ಲಿಂಗಾಯತ ಸಮುದಾಯದ ಸಾಗರ ಖಂಡ್ರೆ ಸಚಿವ ಈಶ್ವರ ಖಂಡ್ರೆ ಪುತ್ರ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಮೊಮ್ಮಗ. ಸಾಗರ ಖಂಡ್ರೆ ಬೆಂಗಳೂರು ಕ್ರೈಸ್ಟ್ ಕಾಲೇಜಿನಿಂದ ಬಿಬಿಎ, ಎಲ್ಎಲ್ಬಿ ಪದವಿ ಪಡೆದುಕೊಂಡಿದ್ದಾರೆ. ಸಾಗರ ಖಂಡ್ರೆ ಕ್ಷೇತ್ರದ ಜನರಿಗೆ ಅಷ್ಟೇನೂ ಪರಿಚಯಸ್ಥರಲ್ಲ. ಆದರೆ ಕೊರೊನಾ ಸಮಯದಲ್ಲಿ ತಂದೆಯೊಂದಿಗೆ ಕ್ಷೇತ್ರದಲ್ಲಿ ಸಂಚರಿಸಿ ಜನರ ನಡುವೆ ಗುರುತಿಸಿಕೊಂಡಿದ್ದರು. ವೃತ್ತಿಯಲ್ಲಿ ವಕೀಲರಾಗಿರುವ ಸಾಗರ್ ಖಂಡ್ರೆ ತಂದೆಯ ನೆರಳಿನಲ್ಲೇ ರಾಜಕೀಯಕ್ಕೆ ಧುಮುಕಿದರು.


























