ಪುತ್ತೂರು : ಮನುಷ್ಯನಿಂದ ಯಾವುದೇ ಅಪೇಕ್ಷೆ ಇಲ್ಲದೆ ಬೆಳೆಯುತ್ತಿರುವ ಗಿಡಗಳು ಪರಿಸರಕ್ಕೆ ಪೂರಕವಾಗಿದೆ. ದ್ವೇಷ ಸಾಧಿಸುವ ಜಗತ್ತಿನಿಂದ ಹೊರಬಂದು ಗಿಡಗಳ ಮೇಲೆ ಕಾಳಜಿ ತೋರಿಸಬೇಕು. ಪರಿಸರ ಉಳಿಸುವ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಿಯ ಜೋಗ್ಲೆಕರ್ ಹೇಳಿದರು.

ವಕೀಲರ ಸಂಘದ ಆಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ನಡೆದ ಪರಿಸರ ದಿನಾಚರಣೆ ಹಾಗೂ ಉಚಿತ ಸಸಿಗಳ ವಿತರಣಾ ಕಾರ್ಯಕ್ರಮದಲ್ಲಿ ಸಸಿಗಳನ್ನು ವಿತರಿಸಿ ಅವರು ಮಾತನಾಡಿದರು.
ಗಿಡಗಳನ್ನು ನೆಟ್ಟ ಬಳಿಕ ಅದನ್ನು ಮಗುವಿನಂತೆ ಜವಾಬ್ದಾರಿಯಿಂದ ಆರೈಕೆ, ಪೋಷಣೆ ಮಾಡಬೇಕು. ನಾವು ದಿನ ನಿತ್ಯದ ಒತ್ತಡಕ್ಕೆ ಒಳಗಾಗಿದ್ದರೂ ಒಂದೇ ಒಂದು ಗಿಡಕ್ಕೆ ಕಾಲಜಿ ವಹಿಸಿದರೆ ಸಾಕು. ಅದು ಚೆನ್ನಾಗಿ ಬೆಳೆದಾಗ ಪರಿಸರಕ್ಕೆ ಉತ್ತಮ ಕೊಡುಗೆ ನೀಡುತ್ತದೆ. ಪರಿಸರ ಉಳಿಸುವ ಕಾಲಜಿ ನಮ್ಮಲ್ಲಿರಬೇಕು. ನಾವು ನೆಟ್ಟ ಗಿಡ ಬೆಳೆದು ಹೂ ಬಿಟ್ಟಾಗ ಅದರಿಂದ ನಮ್ಮ ಮನಸ್ಸಿಗಾಗುವ ಖುಷಿ ನಮ್ಮ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ ಎಂದು ಹೇಳಿದರು.
ಜೂ.5ರ ವಿಶ್ವ ಪರಿಸರ ದಿನದಂದು ನೂತನ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ಗಿಡನೆಡಲಾಗಿದ್ದರೂ ವಕೀಲರ ಸಂಘದ ಅಧ್ಯಕ್ಷರು ಹುಟ್ಟು ಹಬ್ಬದ ದಿನ ಸಾಂಕೇತಿಕವಾಗಿ ಗಿಡ ವಿತರಿಸುವ ಮೂಲಕ ಗಿಡಗಳ ಮೇಲಿನ ಪ್ರೀತಿ ಹಾಗೂ ಪರಿಸರದ ಕಾಲಜಿಯನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಹಿರಿಯ ನ್ಯಾಯವಾದಿ ಪಿ.ಕೆ ಸತೀಶನ್ ರವರಿಗೆ ಗಿಡ ನೀಡುವ ಮೂಲಕ ಸಸಿ ವಿತರಣೆಗೆ ಚಾಲನೆ ನೀಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮಾತನಾಡಿ, ಪ್ರತಿಯೊಬ್ಬ ವಕೀಲರು ಗಿಡ ನೆಡುವ ಮೂಲಕ ಸಮಾಜಕ್ಕೆ ಮಾದರಿಯ ಕೆಲಸ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಮಾತನಾಡಿ, ವಕೀಲ ಮಿತ್ರರೆಲ್ಲರೂ ಗಿಡ ನೆಡುವ ಮೂಲಕ ಮಾದರಿ ಕಾರ್ಯಕ್ರಮವನ್ನಾಗಿ ಮಾಡಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಅರ್ಚನಾ ಕೆ ಉನ್ನಿತ್ತಾನ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹೆಚ್.ಆರ್ ಶಿವಣ್ಣ, 2ನೇ ಹೆಚ್ಚುವರಿ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ ರೈ, ಜೊತೆ ಕಾರ್ಯದರ್ಶಿ ಮಮತಾ ಸುವರ್ಣ, ಮಾಜಿ ಕಾರ್ಯದರ್ಶಿ ಸಂತೋಷ್, ಹಿರಿಯ ನ್ಯಾಯವಾದಿಗಳಾದ ಉದಯ ಶಂಕರ ಶೆಟ್ಟಿ, ಶೀನಪ್ಪ ಗೌಡ ಬೈತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಕೀಲರ ಸಂಘದ ಕೋಶಾಧಿಕಾರಿ ಮಹೇಶ್ ಕೆ. ಸವಣೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಮೋನಪ್ಪ ಎಂ ವಂದಿಸಿದರು.