ಪುತ್ತೂರಿನ ಉರಗ ಸಂರಕ್ಷಕರೊಬ್ಬರು ಹಾವಿನ ಮೊಟ್ಟೆಗಳನ್ನು ಸಂರಕ್ಷಿಸಿ ಅದಕ್ಕೆ ಕೃತಕ ಕಾವು ಕೊಟ್ಟು ಮರಿ ಬಂದ ಬಳಿಕ ರಕ್ಷಿತಾರಣ್ಯಕ್ಕೆ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಬಿಡುತ್ತಿದ್ದಾರೆ. ಇತ್ತೀಚೆಗೆ ಹೆಬ್ಬಾವಿನ 25 ಮೊಟ್ಟೆಗೆ ಕೃತಕ ಕಾವು ನೀಡಿ ಮರಿ ಹೊರಬಂದ ಬಳಿಕ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.

ಬನ್ನೂರು ಕರ್ಮಲದ ಕುಮೇರಡ್ಕ ನಿವಾಸಿ ತೇಜಸ್ ಅವರು ಉರಗ ಸಂರಕ್ಷಕರಾಗಿದ್ದು, ಅವರು ಇತ್ತೀಚೆಗೆ ಕನ್ಯಾನದಲ್ಲಿ 12 ಮತ್ತು ಅನಂತಾಡಿಯಲ್ಲಿ ಸಿಕ್ಕಿದ 13 ಹೆಬ್ಬಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ ಸಂರಕ್ಷಣೆ ಮಾಡಿದ್ದರು.
ಇದೀಗ 25 ಹೆಬ್ಬಾವಿನ ಮರಿಗಳು ಜನಿಸಿದ್ದು, ಅಷ್ಟೂ ಹಾವಿನ ಮರಿಗಳಿಗೆ ಪ್ರಾಥಮಿಕ ಆರೈಕೆ ನೀಡಿ ಅದನ್ನು ಉಪ ವಲಯ ಅರಣ್ಯ ಅಧಿಕಾರಿ ಉಲ್ಲಾಸ್ ಮತ್ತು ಸೀತಾರಾಮ್ ಅವರ ಉಪಸ್ಥಿತಿಯಲ್ಲಿ ರಕ್ಷಿತಾರಣ್ಯಕ್ಕೆ ಬಿಡಲಾಯಿತು.


























