ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ಕೊಲೆಗಡುಕರ ಪರ ಇದೆ. ಕೊಲೆಗಡುಕರಿಗೆ ರಾಜ್ಯದಲ್ಲಿ ಭಯ ಇಲ್ಲ. ನಟ ದರ್ಶನ್ ಕಾಂಗ್ರೆಸ್ ಪರ ಚುನಾವಣೆಯಲ್ಲಿ ಕೆಲಸ ಮಾಡಿದರು ಎಂದು ಅವರನ್ನು ಶಾಮಿಯಾನ ಹಾಕಿ ರಕ್ಷಣೆ ಮಾಡುತ್ತಿದ್ದಾರಾ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಮಾತನಾಡಿದ ಅವರು, ದರ್ಶನ್ ಇರುವ ಠಾಣೆಗೆ ರಕ್ಷಣೆ ಕೊಡಲಾಗಿದೆ. ಜನರಿಗೊಂದು ಕಾನೂನು, ದೊಡ್ಡವರಿಗೊಂದು ಕಾನೂನು, ಕಾಂಗ್ರೆಸ್ ಕಾರ್ಯಕರ್ತರಿಗೊಂದು ಕಾನೂನು ಎಂಬ ಸಂದೇಶವನ್ನು ಸರ್ಕಾರ ರವಾನಿಸಿದೆ ಎಂದರು.
ಕಾನೂನು ರೀತಿಯಲ್ಲಿ ಸರ್ಕಾರ ಕ್ರಮ ವಹಿಸಲಿ. ಕೊಲೆಗಡುಕರ ರಕ್ಷಣೆಯನ್ನು ಸರ್ಕಾರ, ಪೊಲೀಸರು ಮಾಡಬಾರದು ಎಂದು ಹೇಳಿದರು.
ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಕೇಸಿನ ಮಾಹಿತಿ ಗೊತ್ತಿಲ್ಲ. ಮಾಧ್ಯಮದ ಮೂಲಕ ಅಷ್ಟೇ ನೋಡಿದ್ದೇನೆ. ಯಡಿಯೂರಪ್ಪ ಅವರ ಸುದೀರ್ಘವಾದ ರಾಜಕಾರಣ ನೋಡಿದ್ದೇನೆ. ಇದರಲ್ಲಿ ಸರ್ಕಾರದ ಪಾತ್ರದ ಬಗ್ಗೆ ಗೊತ್ತಿಲ್ಲ. ನ್ಯಾಯಾಲಯ ನೆಲದ ಕಾನೂನು ಎತ್ತಿ ಹಿಡಿಯಲಿದೆ.
ಈ ತರಹದ ಆರೋಪಗಳು ಯಡಿಯೂರಪ್ಪ ವಿರುದ್ಧ ಈ ಹಿಂದೆ ಯಾವತ್ತೂ ಕೇಳಿ ಬಂದಿರಲಿಲ್ಲ. ಈಗ ಯಾಕೆ ಅವರ ಬಗ್ಗೆ ಈ ತರಹ ಆರೋಪಗಳು ಬರುತ್ತಿವೆ ಎಂಬುದನ್ನು ಜನ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಎಲ್ಲರ ಮೇಲೆ ಕೇಸ್ ಹಾಕುವಂತಹ ಪ್ರಕರಣಗಳನ್ನು ಕೂಡಾ ಜನ ಗಮನಿಸುತ್ತಿದ್ದಾರೆ ಎಂದು ಶೋಭಾ ಹೇಳಿದರು.


























