ಬೆಂಗಳೂರು : ರಾಜ್ಯದಲ್ಲಿ ಆನೆಗಳು ಸಹಿತ ವನ್ಯಜೀವಿಗಳು ವಿದ್ಯುತ್ ಸ್ಪರ್ಶ ಹಾಗೂ ಇತರ ಅಸ್ವಾಭಾವಿಕ ಕಾರಣಗಳಿಂದ ಸಾವನ್ನಪ್ಪುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿದೆ.
ಇತ್ತೀಚೆಗೆ ಮೈಸೂರಿನಲ್ಲಿ ದಸರಾ ಆನೆ ಅಶ್ವತ್ಥಾಮ ವಿದ್ಯುತ್ ತಗಲಿ ಸಾವನ್ನಪಿರುವುದರ ಬಗ್ಗೆ ಮಾಧ್ಯಮಗಳ ವರದಿ ಆಧರಿಸಿ ಮು.ನ್ಯಾ. ಎನ್.ವಿ.ಅಂಜಾರಿಯಾ ಹಾಗೂ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಈ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿತು.
ಕರೆಂಟ್ ಶಾಕ್ಗೆ ಮೈಸೂರಿನಲ್ಲಿ ಅಶ್ವಥ್ಥಾಮ ಆನೆಯ ಸಾವನ್ನಪ್ಪಿದ್ದು ಸಿಬ್ಬಂದಿ ನಿರ್ಲಕ್ಷ್ಯದಿಂದ ಎಂಬ ವರದಿ ಇದೆ. ಅಲ್ಲದೇ ಚಿಕ್ಕಮಗಳೂರಿನಲ್ಲಿ ಒಂದು ಆನೆ ಹಾಗೂ ಮಡಿಕೇರಿಯಲ್ಲಿ ಕರೆಂಟ್ ಶಾಕ್ಗೆ 2 ಆನೆ ಮೃತಪಟ್ಟಿವೆ. ಹೀಗಾಗಿ ಮೈಸೂರು ಅಶ್ವತ್ಥಾಮ ಕೇಸ್ ಅನ್ನು ಆಧಾರವನ್ನಾಗಿ ಇಟ್ಟುಕೊಂಡ ಹೈಕೋರ್ಟ್ ಸುಮೊಟೋ ಕೇಸ್ ದಾಖಲಿಸಿದೆ. ಆರ್ಟಿಕಲ್ 226 ಅಡಿಯಲ್ಲಿ ಸುಮೊಟೋ ಕೇಸ್ ದಾಖಲಿಸಿದೆ.
ಕರ್ನಾಟಕ ರಾಜ್ಯ ಮತ್ತು ಇತರ ವನ್ಯ ಜೀವಿಗಳ ರಕ್ಷಣೆಗೆ ಏನು ಕ್ರಮ ಇದೆ. ಅವುಗಳ ಸುರಕ್ಷತೆ ಖಾತರಿಗೆ ಯಾವ ಕ್ರಮಗಳಿವೆ. ಆನೆಗಳ ಈ ಸಾವು ಪ್ರಕರಣಗಳ ಬಳಿಕ ಯಾವ ಕ್ರಮ ಆಗಿದೆ. ಅಂತಹ ಸಾವುಗಳ ತಡೆಗೆ ಆಗಿರುವ ಕ್ರಮಗಳು ಏನೇನು? ಯಾವ ಹಂತದಲ್ಲಿ ಕ್ರಮಕ್ಕೆ ಮುಂದಾಗಿದ್ದೀರಾ? ಯಾವ ಅಧಿಕೃತ ಇಲಾಖೆ ಮತ್ತು ಅಧಿಕಾರಿಗಳು ಇದರಲ್ಲಿ ಕೆಲಸ ಮಾಡ್ತಾ ಇದ್ದಾರೆ? ಇದಕ್ಕೆ ಸಂಬಂಧ ಉತ್ತರ ನೀಡಲು ಪ್ರತಿವಾದಿಗಳಿಗೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.


























