ನವದೆಹಲಿ : ಈ ಮೊದಲೇ ಎಲ್ಲರೂ ಊಹೆ ಮಾಡಿದ್ದಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ಕುಟುಂಬದ ಭದ್ರಕೋಟೆಯಾದ ರಾಯ್ಬರೇಲಿಯನ್ನು ಆಯ್ಕೆ ಮಾಡಿಕೊಂಡಿದ್ದು, ಈ ಹಿಂದೆ ಸಂಸದರಾಗಿದ್ದ ವಯನಾಡನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ. ರಾಹುಲ್ ಗಾಂಧಿಯಿಂದ ತೆರವಾಗುವ ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ. ಈ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡಿನಿಂದ ಚುನಾವಣೆ ಪ್ರವೇಶಿಸಲಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ, “ವಯನಾಡನ್ನು ಪ್ರತಿನಿಧಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ವಯನಾಡಿನ ಜನರಿಗೆ ರಾಹುಲ್ ಅವರ ಅನುಪಸ್ಥಿತಿ ಕಾಡದಂತೆ ನಾನು ಕೆಲಸ ಮಾಡುತ್ತೇನೆ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಎಲ್ಲರನ್ನು ಸಂತೋಷಪಡಿಸಲು ಮತ್ತು ಉತ್ತಮ ಪ್ರತಿನಿಧಿಯಾಗಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ” ಎಂದಿದ್ದಾರೆ.
“ಕೇರಳದ ವಯನಾಡಿಗೆ ರಾಹುಲ್ ಗಾಂಧಿ ಆಗಾಗ ಬರುತ್ತಾರೆ. ನಾನು ಕೂಡ ಅಷ್ಟೇ ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ಎಲ್ಲರನ್ನು ಸಂತೋಷಪಡಿಸಲು ಪ್ರಯತ್ನಿಸುತ್ತೇನೆ” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಈ ಮೂಲಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಹುನಿರೀಕ್ಷಿತ ಚುನಾವಣಾ ಚೊಚ್ಚಲ ಪ್ರವೇಶವು ಕೇರಳದ ವಯನಾಡ್‌ನಿಂದ ನಡೆಯಲಿದೆ. ಉತ್ತರ ಪ್ರದೇಶದ ಮತ್ತೊಂದು ಕುಟುಂಬದ ಭದ್ರಕೋಟೆಯಾದ ಅಮೇಥಿ ಈಗಾಗಲೇ ಕಾಂಗ್ರೆಸ್ ಕೈಗೆ ಮರಳಿದೆ.
ರಾಹುಲ್ ಗಾಂಧಿ ಅವರ ಹೃದಯಕ್ಕೆ ಹತ್ತಿರವಾಗಿರುವುದರಿಂದ ಮತ್ತು ಗಾಂಧಿ ಕುಟುಂಬದವರು ತಲೆಮಾರುಗಳಿಂದ ರಾಯ್ಬರೇಲಿಯೊಂದಿಗೆ ಬಾಂಧವ್ಯ ಹೊಂದಿರುವುದರಿಂದ ರಾಹುಲ್ ಗಾಂಧಿ ಅದೇ ಸ್ಥಾನವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನಿನ್ನೆ ಸಂಜೆ ಸಭೆಯ ನಂತರ ಮಾಹಿತಿ ನೀಡಿದ್ದಾರೆ.
2004ರಿಂದ ಸೋನಿಯಾ ಗಾಂಧಿ ಅವರು ಈ ವರ್ಷದ ಆರಂಭದಲ್ಲಿ ರಾಜ್ಯಸಭೆಗೆ ತೆರಳುವವರೆಗೂ ರಾಯ್ಬರೇಲಿ ಕ್ಷೇತ್ರದ ಸ್ಥಾನವನ್ನು ಹೊಂದಿದ್ದರು. ರಾಹುಲ್ ಗಾಂಧಿಯವರ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅವರ ಪತಿ ಫಿರೋಜ್ ಗಾಂಧಿಯವರು ಸಹ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಹಿನ್ನೆಲೆಯಲ್ಲಿ ರಾಯ್ಬರೇಲಿ ಗಾಂಧಿ ಕುಟುಂಬದ ಭದ್ರಕೋಟೆಯಾಗಿದೆ.
ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಜೂನ್ 18ರೊಳಗೆ ವಯನಾಡು ಅಥವಾ ರಾಯ್ಬರೇಲಿಯೊಳಗೆ ತಮ್ಮ ಆಯ್ಕೆ ಯಾವುದೆಂದು ರಾಹುಲ್ ಗಾಂಧಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ರಾಯ್ಬರೇಲಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.




























