ಶತ್ರುಘ್ನ ಸಿನ್ಹಾ ಮಗಳು ಸೋನಾಕ್ಷಿ ಸಿನ್ಹಾ ಅವರು ಝಹೀರ್ ಇಖ್ಬಾಲ್ನ ವಿವಾಹ ಆಗುತ್ತಿದ್ದಾರೆ. ಇದನ್ನು ಅನೇಕರು ಟೀಕಿಸುತ್ತಿದ್ದಾರೆ. ಮತ್ತೊಂದು ವಿಚಾರ ಎಂದರೆ ಈ ಮದುವೆ ಬಗ್ಗೆ ಸ್ವತಃ ಶತ್ರುಘ್ನ ಸಿನ್ಹಾ ಅವರಿಗೆ ಇಷ್ಟ ಇರಲಿಲ್ಲ ಎನ್ನಲಾಗಿತ್ತು. ಮಗಳು ಮದುವೆ ಆಗುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಸ್ವತಃ ಅವರೇ ಈ ವಿಚಾರ ಒಪ್ಪಿಕೊಂಡಿದ್ದಾರೆ.
ಜೂನ್ 23ರ ಸಂಜೆ ನಾವು ವಿವಾಹ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದೇವೆ. ಮದುವೆ ಬಗ್ಗೆ ನಮ್ಮ ಕುಟುಂಬದವರು ಏನನ್ನೂ ಹೇಳಿಲ್ಲ. ಕೆಲವು ಮಾಧ್ಯಮಗಳು ಕೆಲವನ್ನು ಊಹಿಸಿಕೊಂಡು ಬರೆದರು. ಇದು ಕುಟುಂಬದ ಖಾಸಗಿ ವಿಚಾರ. ಇದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದಿದ್ದಾರೆ ಶತ್ರುಘ್ನ ಸಿನ್ಹಾ.
ಮದುವೆ ಎಲ್ಲರ ಮನೆಯಲ್ಲೂ ಆಗುತ್ತದೆ. ಮದುವೆಗೂ ಮೊದಲು ಕೆಲವು ವಿಚಾರಕ್ಕೆ ಮಾತುಕತೆ ಆಗೋದು ಸಾಮಾನ್ಯ. ನಮಗೆ ಎಲ್ಲವೂ ಓಕೆ. ಏನೆಲ್ಲ ತೊಂದರೆ ಇತ್ತೋ ಅದೆಲ್ಲಾ ಪರಿಹಾರ ಆಗಿದೆ. ಇಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಎಲ್ಲಾ ಮದುವೆಯಲ್ಲೂ ಈ ರೀತಿ ಆಗುತ್ತದೆ. ಶತ್ರುಘ್ನ ಸಿನ್ಹಾ ಅವರ ಮಗಳು ಎಂಬ ಕಾರಣಕ್ಕೆ ಸೋನಾಕ್ಷಿ ಜೀವನದಲ್ಲಿ ತನಗೆ ಬೇಕಾದುದನ್ನು ಹೊಂದಲು ಸಾಧ್ಯವಿಲ್ಲ ಎಂದಲ್ಲ. ಜೂನ್ 23ರಂದು ನಾವು ಭರ್ಜರಿ ಎಂಜಾಯ್ ಮಾಡುತ್ತೇವೆ ಎಂದಿದ್ದಾರೆ ಅವರು.
ಈ ಮೊದಲು ಹೇಳಿದ್ದೇನು?
ನನ್ನ ಮಗಳ ಬಗ್ಗೆ, ಅವಳ ನಿರ್ಧಾರಗಳ ಬಗ್ಗೆ ನಾನು ಯಾರೊಂದಿಗೂ ಮಾತನಾಡಿಲ್ಲ. ಅವಳು ಮದುವೆ ಬಗ್ಗೆ ನನಗೆ ಏನನ್ನೂ ಹೇಳಿಲ್ಲ. ಮಾಧ್ಯಮದಲ್ಲಿ ಆದ ವರದಿ ಬಗ್ಗೆ ಅಷ್ಟೇ ನನಗೆ ತಿಳಿದಿದೆ. ಅವಳು ನಮಗೆ ಆಮಂತ್ರಣ ನೀಡಿದರೆ ನಾನು ಮತ್ತು ನನ್ನ ಹೆಂಡತಿ ಹೋಗಿ ಆಶೀರ್ವಾದ ಮಾಡುತ್ತೇವೆ. ಅವಳ ಸಂತೋಷವನ್ನು ನಾವು ಬಯಸುತ್ತೇವೆ ಎಂದು ಶತ್ರುಘ್ನ ಸಿನ್ಹಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು.
ಪ್ರೀತಿ
ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್ ಇಖ್ಬಾಲ್ ಭೇಟಿ ಆಗಿದ್ದು, ಸಲ್ಮಾನ್ ಖಾನ್ ಅವರಿಂದ. ಇಖ್ಬಾಲ್ ಸಲ್ಲುನ ಗೆಳೆಯ. ಸಲ್ಲುನಿಂದಾಗಿ ಇವರು ಭೇಟಿ ಆದರು. ಇಬ್ಬರ ಮಧ್ಯೆ ಗೆಳೆತನ ಬೆಳೆದು, ಆ ಬಳಿಕ ಪ್ರೀತಿ ಮೂಡಿತು.




























