ಉಪ್ಪಿನಂಗಡಿ : ಟ್ಯಾಂಕರ್ ಲಾರಿಯೊಂದು ಸ್ವಿಫ್ಟ್ ಕಾರಿಗೆ ಡಿಕ್ಕಿಯಾಗಿ ದೂಡಿಕೊಂಡು ಬಂದ ಹಿನ್ನೆಲೆ ಸ್ವಿಫ್ಟ್ ಕಾರು ಹಿಂಬದಿಯಲ್ಲಿ ಬರುತ್ತಿದ್ದ ಆಲ್ಟೊ ಕಾರಿಗೆ ಡಿಕ್ಕಿಯಾಗಿ ಸರಣಿ ಅಪಘಾತವಾದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಯಲ್ಲಿ ನಡೆದಿದೆ.
ಘಟನೆಯಲ್ಲಿ ಆಲ್ಟೊ ಕಾರಿನಲ್ಲಿದ್ದ ಬಜತ್ತೂರಿನ ಮೂವರು ಹಾಗೂ ಸ್ವಿಫ್ಟ್ ಕಾರಿನ ಚಾಲಕ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಿನಿಂದ ಮಂಗಳೂರು ಕಡೆಗೆ ದಿನೇಶ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಲಾರಿ, ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಶಿರಾಡಿ ಅರಣ್ಯ ಇಲಾಖೆ ನರ್ಸರಿ ಬಳಿ ಕಾಂಕ್ರಿಟ್ ರಸ್ತೆಯಲ್ಲಿ ಎದುರಿನಿಂದ ಮಹೇಶ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿಯಾಗಿ ದೂಡಿಕೊಂಡು ಬಂದು ಸ್ವಿಫ್ಟ್ ಕಾರಿನ ಹಿಂಬದಿಯಿಂದ ಬಜತ್ತೂರಿನ ರೆಂಜಾಲ ನಿವಾಸಿ ಮನೋಹರ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಆಲ್ಟೊ ಕಾರಿಗೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಆಲ್ಟೊ ಕಾರಿನಲ್ಲಿದ್ದ ಮನೋಹರ ಅವರ ಬಾವ ನಾರಾಯಣ ಕೆ., ತಾಯಿ ದಮಯಂತಿ, ಸಂಬಂಧಿಕರಾದ ಕೂಸಮ್ಮ ಹಾಗೂ ಸ್ವಿಫ್ಟ್ ಕಾರು ಚಾಲಕ ಮಹೇಶ್ ಅವರು ಗಾಯಗೊಂಡಿದ್ದಾರೆ.
ಟ್ಯಾಂಕರ್ ಲಾರಿ ಚಾಲಕ ದಿನೇಶ್ ಅವರು ಅಜಾಗರೂಕತೆಯಿಂದ ರಾಂಗ್ ಸೈಡ್ ನಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿರುವುದಾಗಿ ಆಲ್ಟೊ ಕಾರು ಚಾಲಕ ಮನೋಹರ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























