ಹೈದ್ರಾಬಾದ್ : ಊಟ ಮಾಡುವಾಗ ಅಥವಾ ಏನಾದ್ರೂ ತಿನ್ನುವಾಗ ಆಹಾರ ಗಂಟಲಲ್ಲಿ ಸಿಲುಕಿದರೆ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಅದಕ್ಕಾಗಿಯೇ ನಿಧಾನವಾಗಿ ಊಟ ಮಾಡಬೇಕು. ಆಹಾರವನ್ನು ಸರಿಯಾಗಿ ಜಗಿದು ತಿನ್ನಬೇಕು ಎಂದು ಹೇಳುತ್ತಿರುತ್ತಾರೆ. ಆಹಾರ ಗಂಟಲಲ್ಲಿ ಸಿಲುಕಿದರೆ ಅದು ಕೆಲವೊಮ್ಮೆ ನಮ್ಮ ಪ್ರಾಣಕ್ಕೆಯೇ ಕುತ್ತು ತರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಚಿಕನ್ ಬಿರಿಯಾನಿ ತಿನ್ನುವಾಗ ಚಿಕನ್ ಪೀಸ್ ಗಂಟಲಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಈ ಘಟನೆ ಹೈದರಬಾದ್‌ನ ಶಾದ್ ನಗರದಲ್ಲಿ ನಡೆದಿದ್ದು, ಬಿರಿಯಾನಿ ತಿನ್ನುವಾಗ ಗಂಟಲಲ್ಲಿ ಚಿಕನ್ ಪೀಸ್ ಸಿಲುಕಿದ ಪರಿಣಾಮ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಅಣ್ಣಾರಾಮ್ ಗ್ರಾಮದ ನಿವಾಸಿ ಶ್ರೀಕಾಂತ್ (39) ಎಂಬ ವ್ಯಕ್ತಿ ತನ್ನ ಸಹೋದರಿಯನ್ನು ಭೇಟಿ ಮಾಡಲೆಂದು ಹೈದರಬಾದಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಅಲ್ಲೇ ಒಂದು ಬಾರ್‌ಗೆ ಹೋಗಿ ಮದ್ಯ ಮತ್ತು ಚಿಕನ್ ಬಿರಿಯಾನಿ ಸೇವನೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅವರಿಗೆ ಉಸಿರುಗಟ್ಟಿದಂತಾಗಿ ತಕ್ಷಣ ಬಾರ್‌ನಿಂದ ಹೊರಬರುತ್ತಾರೆ. ತೀವ್ರ ಉಸಿರಾಟದ ತೊಂದರೆಯುಂಟಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ. ಆ ತಕ್ಷಣ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಶ್ರೀಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಚಿಕಿತ್ಸೆಗೂ ಮುನ್ನವೇ ಅವರು ಸಾವನ್ನಪ್ಪಿದ್ದಾರೆ.
ಮೊದಲಿಗೆ ಅತಿಯಾದ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಸಂಶಯಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಗಂಟಲಲ್ಲಿ ಮಾಂಸದ ತುಂಡು ಸಿಕ್ಕಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ವರದಿಯಾಗಿದೆ.


























