ಮಂಗಳೂರು : ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ಯುವಕರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿ ಪೊಲೀಸ್ ಇಲಾಖೆ ಹಾಗೂ ಸರಕಾರದ ವಿರುದ್ಧ ಎಸ್.ಡಿ.ಪಿ.ಐ ವತಿಯಿಂದ ಪ್ರತಿಭಟನೆ ನಡೆಯಿತು.
ಕೊಣಾಜೆ ಚಲೋ ಪ್ರತಿಭಟನೆಯನ್ನು ಎಸ್.ಡಿ.ಪಿ.ಐ ಹಮ್ಮಿಕೊಂಡಿದ್ದು, ಕೊಣಾಜೆ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟಿಸಲಾಯಿತು.

ಬೋಳಿಯಾರ್ ಘಟನೆ ಹೆಸರಿನಲ್ಲಿ ಮಂಗಳೂರು ನಗರ ಪೊಲೀಸರು ಮತ್ತು ಸರ್ಕಾರ ಮುಸ್ಲಿಂ ಯುವಕರನ್ನು ಬೇಟೆಯಾಡುತ್ತಿರುವುದಾಗಿ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಲಾಯಿತು.
ಮಹಿಳೆಯರು ಸೇರಿದಂತೆ ನೂರಾರು ಎಸ್.ಡಿ.ಪಿ.ಐ ಕಾರ್ಯಕರ್ತರು ಭಾಗಿಯಾಗಿದ್ದರು. ಎಸ್.ಡಿ.ಪಿ.ಐ ಪ್ರತಿಭಟನೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರತಿಭಟನಾಕಾರರು ಪೊಲೀಸ್ ಠಾಣೆಯ ಒಳ ಪ್ರವೇಶಿಸದಂತೆ ಪ್ರವೇಶ ದ್ವಾರದ ಬಳಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರ್ ಎಂಬಲ್ಲಿ ಜೂ.9ರಂದು ಚೂರಿ ಇರಿತ ಘಟನೆ ನಡೆದಿತ್ತು.


























