ಕಲ್ಲಡ್ಕ : ಗ್ರಾಮ ಮಟ್ಟದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯು ಗ್ರಾಮದ ಪ್ರತಿ ವಾರ್ಡಿನ ಕೋವಿಡ್ ನಿರ್ಮೂಲನ ಪಡೆಯ ಜೊತೆಗೆ ಸೇರಿ ಕೋವಿಡ್ ಹರಡದಂತೆ ಸಾಮೂಹಿಕವಾಗಿ ಪ್ರಯತ್ನ ಪಟ್ಟಾಗ ಮಾತ್ರ ನಮ್ಮ ಗ್ರಾಮ ವನ್ನು ಕೋವಿಡ್ ಮುಕ್ತ ಗ್ರಾಮ ವನ್ನಾಗಿ ಮಾಡಲು ಸಾಧ್ಯ ಎಂದು ವೀರಕಂಭ ಗ್ರಾಮದ ಮಜಿ ಶಾಲಾ ಮುಖ್ಯೋಪಾಧ್ಯಾಯರಾದ ನಾರಾಯಣ ಪೂಜಾರಿ ಎಸ್ ಕೆ ರವರು ವೀರಕಂಭ ಗ್ರಾಮದ ರಾಜೀವಗಾಂಧಿ ಸಮುದಾಯಭವನದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ 19 ರ ಗ್ರಾಮಮಟ್ಟದ ಕೋವಿಡ್ ನಿರ್ಮೂಲನ ಕಾರ್ಯಪಡೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಜ್ಯೋತಿ ಕೆ ಅವರು ಈಗಾಗಲೇ ಗ್ರಾಮದ ಮೈರ ಎಂಬಲ್ಲಿನ ಕೋರೆಯ ವಲಸೆ ಕಾರ್ಮಿಕರಿಗೆ ಹಾಗೂ ಸುತ್ತಮುತ್ತಲಿನ ಮನೆಯವರ ಆರೋಗ್ಯ ತಪಾಸಣೆ ಮಾಡಿದ್ದು ಕೋರೆಯ 5 ಮಂದಿಗೆ ಕೋರೋನಾ ದೃಢವಾಗಿದ್ದು ಗ್ರಾಮ ಪಂಚಾಯತ್ ಎಚ್ಚರವಹಿಸುವಂತೆ ತಿಳಿಸಿದರು. ಹಾಗೂ ಗ್ರಾಮದ ಕೆಲವೊಂದು ಅಂಗಡಿಗಳು ಕೋವಿಡ್ ನಿಯಮವನ್ನು ಪಾಲಿಸದ ಕಾರಣ ಕೂಡಲೇ ಪಂಚಾಯತಿ ನಿಂದ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಸಭೆಯಲ್ಲಿ ಎಲ್ಲರೂ ಆಗ್ರಹಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಪಂಚಾಯತ್ ಸದಸ್ಯ ರಘು ಪೂಜಾರಿ ಮಂಗಿಲಪದವು ಪರಿಸರದಲ್ಲಿರುವ ಸಿಸಿ ಕ್ಯಾಮೆರಾ ಹಾಳಾಗಿದ್ದು ಇದರಿಂದ ಆ ಪರಿಸರದ ಜನರು ಭಯವಿಲ್ಲದೆ ನಿಯಮ ಪಾಲಿಸುತ್ತಿಲ್ಲ ಕೂಡಲೇ ಸರಿಪಡಿಸಬೇಕು ಹಾಗೂ ಗ್ರಾಮದ ಎಲ್ಲಾ ರಸ್ತೆಗಳಲ್ಲಿ ನಿಯಮವನ್ನು ಪಾಲಿಸದ ಕಾರಣ ದಿನಕ್ಕೆ ಒಮ್ಮೆಯಾದರೂ ಪೊಲೀಸ್ ಗಸ್ತು ನಡೆಸಬೇಕೆಂದು ಆಗ್ರಹಿಸಿದರು ಅಲ್ಲಲ್ಲಿ ಡೆಂಗ್ಯೂ ಜ್ವರ ಕೆಲವರಲ್ಲಿ ಕಾಣಿಸಿಕೊಂಡಿದ್ದು ಕೂಡಲೇ ಪಂಚಾಯತ್ ವತಿಯಿಂದ ರಬ್ಬರ್ ತೋಟದ ಮಾಲಿಕರಿಗೆ ನೋಟಿಸ್ ಜಾರಿ ಮಾಡಿ ಗಿಡದಲ್ಲಿ ಹಾಲು ಶೇಖರಣೆ ಮಾಡಲು ಮಾಡಿದ ವ್ಯವಸ್ಥೆಯಲ್ಲಿ ನೀರು ನಿಲ್ಲದಂತೆ ಮಾಡಬೇಕೆಂದು ಪಂಚಾಯತ್ ಉಪಾಧ್ಯಕ್ಷ ಶ್ರೀಮತಿ ಶೀಲಾ ವೇಗಸ್ ಒತ್ತಾಯಿಸಿದರು. ಅದಕ್ಕೆ ಪಂಚಾಯತ್ ಅಧ್ಯಕ್ಷರು ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ವ್ಯಾಪ್ತಿಯ 3 ಪ್ರಾಥಮಿಕ ಶಾಲೆ ಗಳಾದ ಮಜಿ , ಕೆಲಿಂಜ ,ಹಾಗೂ ಬಾಯಿಲ ಶಾಲೆಯ ಎಲ್ಲಾ ಸರಕಾರಿ ಶಿಕ್ಷಕರು ಸೇರಿ ವೀರಕಂಭ ಗ್ರಾಮ ವ್ಯಾಪ್ತಿಯ ಎಲ್ಲಾ ಆಶಾ ಕಾರ್ಯಕರ್ತರಿಗೆ ಛತ್ರಿ ಹಾಗೂ ಆಹಾರ ಸಾಮಗ್ರಿಗಳ ಕಿಟ್ ನೀಡಿದ್ದು ಇದನ್ನು ಪಂಚಾಯತ್ ಅಧ್ಯಕ್ಷರು ವಿತರಿಸಿದರು. ಆಶಾ ಕಾರ್ಯಕರ್ತೆಯರು ಕಿಟ್ ಪಡೆದು ಗ್ರಾಮ ವ್ಯಾಪ್ತಿಯ ಸರಕಾರಿ ಶಾಲಾ ಶಿಕ್ಷಕರಿಗೆ ಅಭಿನಂದನೆ ತಿಳಿಸಿದರು.
ಸಭೆಯಲ್ಲಿ ಗ್ರಾಮ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗಿರಿಜಾ, ಗ್ರಾಮಲೆಕ್ಕಿಗ ಕರಿಬಸಪ್ಪ ಹಾಗೂ ಟಾಸ್ಕ್ ಫೋರ್ಸ್ ಸಮಿತಿಯ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.