ಪುತ್ತೂರು : ವಿಜಯಸಾಮ್ರಾಟ್ ಸಂಸ್ಥೆಯ ವತಿಯಿಂದ ಪುತ್ತೂರಿನಲ್ಲಿ ನಡೆದ ಮೊದಲನೇ ಸೀಸನ್ ‘ಪಿಲಿಗೊಬ್ಬು ಕಾರ್ಯಕ್ರಮ’ ಹಾಗೂ ‘ಆಹಾರ ಮೇಳ’ವು ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಗಮನ ಸೆಳೆದಿದ್ದು, ಗ್ರಾಮೀಣ ಪ್ರದೇಶಗಳನ್ನೊಳಗೊಂಡ ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ದಸರಾ ಸಂದರ್ಭ ಅಕ್ಟೋಬರ್ 5ರಂದು ಫುಡ್ ಫೆಸ್ಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, 6ರಂದು ಎರಡನೇ ಸೀಸನ್‌ನ ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮವು ಅದ್ದೂರಿ ಹಾಗೂ ವೈಭವಯುತವಾಗಿ ಜರುಗಲಿದೆ ಎಂದು ವಿಜಯಸಾಮ್ರಾಟ್ ಪುತ್ತೂರು ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ತಿಳಿಸಿದರು.

ಅವರು ದರ್ಬೆಯ ಶ್ರೀರಾಮ ಸೌಧ ಕಟ್ಟಡದಲ್ಲಿ ನಡೆದ ಪಿಲಿಗೊಬ್ಬು ಕಾರ್ಯಕ್ರಮ ಹಾಗೂ ಆಹಾರ ಮೇಳ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ ಹಾಗೂ ಯೋಜನೆಯ ಬಗ್ಗೆ ಚರ್ಚಿಸಲಾಯಿತು.
ವೇದಿಕೆಯಲ್ಲಿ ಪಿಲಿಗೊಬ್ಬು ಸಮಿತಿಯ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್, ಸಂಚಾಲಕ ನಾಗರಾಜ್ ನಡುವಡ್ಕ, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು ಹಾಗೂ ಪಿಲಿಗೊಬ್ಬು ಸಮಿತಿಯ ಪದಾಧಿಕಾರಿಗಳು ವಿಜಯಸಾಮ್ರಾಟ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.



























