ವಿಟ್ಲ : ಮಾಣಿಲ ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ನೇತೃತ್ವದಲ್ಲಿ 3ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ ನಡೆಯಿತು.

ಮಾಣಿಲ ಗ್ರಾಮದ ಸುಮಾರು 160 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮತ್ತು ಹತ್ತನೇ ತರಗತಿಯಲ್ಲಿ ಸಾಧನೆಗೈದ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಗಣ್ಯರ ಸಮ್ಮುಖದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ತತ್ವದರ್ಶನಗಳನ್ನು ಹೊಂದಿಟ್ಟುಕೊಂಡು ಸಂಘದ ಪ್ರೇರಣೆಯ ಜೊತೆಗೆ ಸಮಾನ ಮನಸ್ಕ ಯುವಕರ ತಂಡ ಒಂದು ಮಾಡುತ್ತಿರುವ ಕಾರ್ಯ ನಮಗೆಲ್ಲರಿಗೂ ಮಾದರಿ ಎಂದು ಸಾಮಾಜಿಕ ಕಾರ್ಯಕರ್ತರು ಮಾತೃಭೂಮಿಯ ವೇದಿಕೆಯ ಮಾರ್ಗದರ್ಶಕರು ಆಗಿರುವ ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದರು.

ಇಂದಿನ ದಿನಮಾನಗಳಲ್ಲಿ ಸರಕಾರದ ಕೆಲವೊಂದು ಯೋಜನೆಗಳು ಮಕ್ಕಳಿಗೆ ಸರಿಯಾಗಿ ಪೂರೈಕೆಯಾಗದೆ ಇದ್ದರೂ ಇಂತಹ ಯುವ ಸಮಾಜ ಮಾಡುತ್ತಿರುವಂತಹ ಕೆಲಸ ಕಾರ್ಯಗಳು ಸಾಧನೆವಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ನಿರೂಪಕರು ಮತ್ತು ವಾರ್ತಾ ವಾಚಕರದ ಡಾ. ಪ್ರಿಯ ಹರೀಶ್ ಅವರು ಮಕ್ಕಳನ್ನು ಹುರಿದುಂಬಿಸುವುದರ ಜೊತೆಗೆ ಮಕ್ಕಳು ಜೀವನದಲ್ಲಿ ಪರಿಶ್ರಮದ ಮುಖಾಂತರ ಗೆಲ್ಲಬೇಕು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.

ಮುರುವ ನಡುಮನೆ ಮಹಾಬಲ ಭಟ್ ಮಾತನಾಡಿ ಶಾಲೆಗಳ ಅಲಿ ಉಳಿವಿನ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮವನ್ನು ಮಾಡಿ ಮಕ್ಕಳನ್ನು ಗ್ರಾಮದ ಎಲ್ಲಾ ಶಾಲೆಗಳಲ್ಲಿ ಸೇರಿಸಲು ಉತ್ತೇಜಿಸುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾತೃಭೂಮಿ ಯುವ ವೇದಿಕೆಯ ಅಧ್ಯಕ್ಷರಾದ ರಂಜಿತ್ ಕುಮಾರ್ ಮುಜೂರು ಮಕ್ಕಳು ಸಂಸ್ಕಾರಯುತ ಗುಣಗಳನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗಿ ಬೆಳೆಸುವಲ್ಲಿ ಪೋಷಕರ ಪಾತ್ರ ಮಹತ್ತರವಾದುದು ಎಂದರು.
ಈ ಸಂದರ್ಭದಲ್ಲಿ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದಂತ ಬಾಲಕೃಷ್ಣ ಮಾಸ್ಟರ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಮೌನಪ್ರಾರ್ಥನೆ ನಡೆಸಲಾಯಿತು.
ಎಸ್.ಎಸ್.ಎಲ್.ಸಿಯಲ್ಲಿ ಮಹತ್ತರ ಸಾಧನೆಗೈದ ಸರಕಾರಿ ಪ್ರೌಢಶಾಲೆ ಮಾಣಿಲ ಇಲ್ಲಿನ ವಿದ್ಯಾರ್ಥಿಗಳಾದ ದೀಕ್ಷಿತ, ಕೀರ್ತನ ಎಸ್ ಕುಲಾಲ್ ಹಾಗೂ ಮನೀಶ್ ಕುಮಾರ್ ರನ್ನು ಸನ್ಮಾನಿಸಲಾಯಿತು.
ಸಮೀಕ್ಷಾ ವೈಯಕ್ತಿಕ ಗೀತೆಯನ್ನು ಹಾಡಿದರು. ರವಿ ಮಾಣಿಲ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾತೃಭೂಮಿ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಕೊಂಕೋಡು ಸ್ವಾಗತಿಸಿ, ಸಂಚಾಲಕರಾದ ಸುದೇಶ್ ಮಾಣಿಲ ವಂದಿಸಿದರು. ತೀರ್ಥನಾ, ಸ್ಮಿತಾ, ಲಾವಣ್ಯ ಪ್ರಾರ್ಥಿಸಿ, ಉಪನ್ಯಾಸಕರಾದ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.


























