ಪುತ್ತೂರು: ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದಲ್ಲಿ ನಡೆದ ಕರುಳು ಹಿಂಡುವ ನೋವಿನ ಕಥೆ. ಮನೆ ಯಜಮಾನನ ಹೆಸರು ರುಕ್ಮಯ್ಯ ಗೌಡ. ತನ್ನ ಬಡತನದ ಕಾರಣಕ್ಕೆ ಒಂದೆಡೆ ಕಣ್ಣು ಸಮಸ್ಯೆ ಇನ್ನೊಂದೆಡೆ ಜಾಗದ ಸಮಸ್ಯೆ ಎದುರಿಸುತ್ತಿರುವ ಬಡ ಕುಟುಂಬದ ಹೃದಯ ವಿದ್ರಾವಕ ಸನ್ನಿವೇಶ ಎಂತವನನ್ನೂ ಧೃತಿಗೆಡಿಸುವಂತಿದೆ.ಆದರೆ ಇದೀಗ ಈ ದುರಂತ ಕಥೆಯ ಬಗ್ಗೆ ತಿಳಿದು ಸ್ಥಳೀಯರು ಸ್ಪಂದಿಸಿದ್ದಾರೆ. ಅದೇ ರೀತಿ ನರಿಮೊಗರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರು ಸುಧಾಕರ್ ಕುಲಾಲ್ ಸಾರ್ವಜನಿಕರನ್ನು ಜೊತೆ ಗೂಡಿಸಿ ಈ ಸ್ಫೂರ್ತಿದಾಯಕ ಕೆಲಸಕ್ಕೆ ಕೈ ಜೋಡಿಸಿದ್ದಾರೆ.
ಅಶೋಕ್ ಕುಮಾರ್ ಪುತ್ತಿಲ ರವರು ಆರೋಗ್ಯ ಅಧಿಕಾರಿ ಅವರನ್ನು ಭೇಟಿಯಾಗಿ ರುಕ್ಮಯ್ಯ ಗೌಡ ಆರೋಗ್ಯ ಸ್ಥಿತಿ ಬಗ್ಗೆ ತಿಳಿಸಿದ್ದು,ಪಿಡಿಒ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬಡಕೋಡಿಯ ಡಾ. ನಮಿತಾ ರವರನ್ನು ಜೊತೆ ಕರೆದುಕೊಂಡು ರುಕ್ಮಯ್ಯ ಗೌಡರ ಮನೆಗೆ ತೆರಳಿ ಅವರ ಆರೋಗ್ಯ ತಪಾಸಣೆ ನಡೆಸಿದರು. ತಪಾಸಣೆ ನಡೆಸಿದ ಡಾ. ನಮಿತಾ ರವರು ರುಕ್ಮಯ್ಯ ಗೌಡರಿಗೆ ರಕ್ತ ಹೀನತೆ ಮತ್ತು ನಿಶಕ್ತಿ ಸಮಸ್ಯೆ ಇದ್ದು,ಕ್ಯಾಟರೆಕ್ಟ್, ಬಿಪಿ,ಶುಗರ್ ಕೂಡ ಇರುವ ಕಾರಣ ಅವರಿಗೇ ಸೂಕ್ತ ರೀತಿಯ ಚಿಕಿತ್ಸೆಯ ಅಗತ್ಯತೆ ಇದೆ, ಪಂಚಾಯತ್ ಮತ್ತು ಸಾರ್ವಜನಿಕರು ಸೇರಿ ಸೂಕ್ತ ರೀತಿಯ ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು. ಅದೇ ರೀತಿ ನರಿಮೊಗರು ಗ್ರಾಮ ಪಂಚಾಯತ್ ನ ಪಿಡಿಒ ರವಿಚಂದ್ರ ರವರು ರುಕ್ಮಯ್ಯ ಗೌಡರಿಗೆ ಮೂಲವ್ಯಾಧಿ ತೊಂದರೆ ಇರುವ ಕಾರಣಕ್ಕಾಗಿ ಕಮೊಡ್ ಶೌಚಾಲಯ ವ್ಯವಸ್ಥೆಯನ್ನೂ ಮಾಡಲು ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ ಆಶಾ ಪುತ್ತೂರಾಯ ಅವರ ನೇತೃತ್ವದಲ್ಲಿ ಈ ಕೆಲಸಕ್ಕೆ ಸ್ಪಂದನೆ ದೊರೆತಿದೆ. ಹಾಗೂ ಸಂಪೂರ್ಣವಾಗಿ ಮನೆಯ ಮೇಲ್ಛಾವಣಿ ದುರಸ್ತಿ ಕಾರ್ಯವನ್ನು ಬಿಎಸ್ಎನ್ಎಲ್ ನ ನಿವೃತ್ತ ಸುಂದರ ನಾಯ್ಕ ಬಯ್ಯಂಗಳ ಮತ್ತು ಪೂವಪ್ಪ, ವಿನೋದ್, ಸೇಸಪ್ಪ ಆಚಾರ್ಯ, ಯತೀಶ್, ಕಮಲಾಕ್ಷ ನೆರವೇರಿಸಿದರು. ಸ್ವಇಚ್ಚೆಯಿಂದ ತಮ್ಮ ಸ್ವಂತ ಹಣದಿಂದ ನಿರ್ವಹಿಸಿದರು. ಇವರು ಪ್ರತಿ ವರ್ಷ ತಮ್ಮ ಸ್ವಂತ ದುಡಿಮೆಯ ಹಣದಲ್ಲಿ 20% ಹಣವನ್ನು ಸಮಾಜ ಸೇವೆಗೆ ಮೀಸಲಿಡುವ ಮೂಲಕ ಬಡವರಿಗೆ ತಮ್ಮ ಕೈಲಾದಷ್ಟು ಸೇವೆ ಸಲ್ಲಿಸುತ್ತಿದ್ದಾರೆ.
ಯುವ ಮೋರ್ಚಾ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ವಿನೋದ್ ಶಾಂತಿಗೊಡು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶ್ರೀರಾಮ ಗೆಳೆಯರ ಬಳಗದ ಸದಸ್ಯರುಗಳಾದ ಧನಂಜಯ,ಪ್ರದೀಪ್ ಉಪಸ್ಥಿತರಿದ್ದರು.