ಪುತ್ತೂರು : ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಟ್ಟು 250 ಮನೆ ಮಂಜೂರಾಗಿದೆ. ಮನೆ ಮಂಜೂರು ಮಾಡುವಂತೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ವಸತಿ ಸಚಿವ ಝಮೀರ್ ಅಹ್ಮದ್ ರವರಿಗೆ ಮನವಿ ಮಾಡಿದ್ದರು.
ಮನವಿಯನ್ನು ಪುರಸ್ಕರಿಸಿದ ಸಚಿವರು ಏಕಕಾಲಕ್ಕೆ 250 ಮನೆ ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸರಕಾರದಿಂದ ಯಾವುದೇ ಮನೆ ಮಂಜೂರು ಆಗಿರಲಿಲ್ಲ. ಮನೆ ನಿರ್ಮಾಣಕ್ಕೆ ಗ್ರಾಪಂಗಳ ಮೂಲಕ ಸಲ್ಲಿಸಿದ ಅರ್ಜಿಗಳು ಹಾಗೇ ಇದೆ. ಮನೆ ನಿರ್ಮಾಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಅರ್ಜಿ ಬಾಕಿ ಇದೆ. ಕಳೆದ ಸರಕಾರದ ಅವಧಿಯಲ್ಲಿ ಒಂದೇ ಒಂದು ಮನೆ ಮಂಜೂರಾಗಿರಲಿಲ್ಲ. ಮನೆಗಾಗಿ ಬಡವರು ಅರ್ಜಿ ಹಾಕಿ ಕಳೆದ ಮೂರು ವರ್ಷಗಳಿಂದ ಕಾಯುತ್ತಿದ್ದು, ಮನೆ ಮಂಜೂರು ಮಾಡುವಂತೆ ಸಚಿವರಿಗೆ ಶಾಸಕರು ಮನವಿ ಮಾಡಿದ್ದರು.
ಒಟ್ಟು 250 ಮನೆ ಮಂಜೂರಾಗಿದ್ದು, ಪ್ರತೀ ಗ್ರಾಪಂಗಳಿಂದ ಬಂದಿರುವ ಅರ್ಜಿಗಳನ್ನು ವಿಲೇವಾರಿ ಮಾಡಿ ಮನೆ ಹಂಚಿಕೆ ಕಾರ್ಯ ನಡೆಯಲಿದೆ.
ಮಂಜೂರಾಗಿರುವ ಮನೆ
- ಒಟ್ಟು 250
- ಬಸವ ವಸತಿ : 190
- ಅಂಬೇಡ್ಕರ್ ನಿಗಮ : 60
ಮನೆಕಟ್ಟಲು ಅಸಕ್ತರಾದ ಸಾವಿರಾರು ಬಡವರು ಗ್ರಾಪಂ ಗೆ ಸಲ್ಲಿಸಿದ ಅರ್ಜಿಗಳು ಗ್ರಾಪಂ ಕಚೇರಿಯಲ್ಲೇ ಕಳೆದ ಮೂರು ವರ್ಷಗಳಿಂದ ಕೊಳೆಯುತ್ತಿದೆ. ಮನೆ ಇಲ್ಲದವರಿಗೆ ಮನೆ ಕೊಡಬೇಕು ಎಂದು ಸರಕಾರದ ಗಮನಕ್ಕೆ ತಂದಿದ್ದೆ, ವಸತಿ ಸಚಿವರಾದ ಝಮೀರ್ ಅಹ್ಮದ್‌ರವರಿಗೂ ಮನವಿ ಮಾಡಿದ್ದೆ. ಇದೀಗ ಮೊದಲ ಹಂತದಲ್ಲಿ 250 ಮನೆ ಮಂಜೂರಾಗಿದೆ. ಮುಂದಿನ ಹಂತಗಳಲ್ಲಿ ಇನ್ನಷ್ಟು ಮನೆಗಳು ಮಂಜೂರಾಗಲಿದೆ. ಪ್ರತೀ ಗ್ರಾಪಂ ನಲ್ಲಿರುವ ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಮನೆ ಇಲ್ಲದ ಕಡುಬಡವರಿಗೆ ಮನೆ ಹಂಚುವ ಕಾರ್ಯ ನಡೆಯಲಿದೆ. ಇದು ಮನೆ ಇಲ್ಲದವರಿಗೆ ಒಂದು ಶುಭ ಸುದ್ದಿಯಾಗಿದೆ.
-ಅಶೋಕ್ ರೈ, ಶಾಸಕರು, ಪುತ್ತೂರು