ಮಂಗಳೂರು : ಕಾಮಗಾರಿ ವೇಳೆ ಭೂಕುಸಿತ ಉಂಟಾಗಿ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಇನ್ನೋರ್ವ ಕಾರ್ಮಿಕ ರಾಜ್ ಕುಮಾರ್ ನೀಡಿದ ದೂರಿನ ಮೇರೆಗೆ ಪ್ರೊಜೆಕ್ಟ್ ಮ್ಯಾನೇಜರ್ ಹರ್ಷವರ್ಧನ್, ಸೈಟ್ ಇನ್ ಚಾರ್ಜ್ ಸಂತೋಷ್, ನಾಗರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಮಾರು 2 ತಿಂಗಳಿನಿಂದ ರಾಜ್ ಕುಮಾರ್, ಚಂದನ್ ಹಾಗೂ ಇತರ ಕೆಲಸಗಾರರು ಕಂಟ್ರಾಕ್ಟರ್ ವೇಣುಗೋಪಾಲ್ ಎಂಬವರ ಅಧೀನದಲ್ಲಿ ಕೆಲಸ ಮಾಡಿಕೊಂಡಿದ್ದು, ಅಂತೆಯೇ ಬಲ್ಮಠದ ಮಂಗಳೂರು ನರ್ಸಿಂಗ್ ಆಸ್ಪತ್ರೆಯ ಮುಂಭಾಗದಲ್ಲಿ ಖಾಸಗಿ ಕನ್ಸ್ಟ್ರಕ್ಷನ್ ಅವರಿಂದ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಕಾಮಗಾರಿಯನ್ನು ಸಬ್ ಕಂಟ್ರಾಕ್ಟರ್ ಆಗಿ ಪಡೆದಿರುವ ಪದ್ಮಜ ಇಂಜಿನಿಯರಿಂಗ್ ಸರ್ವಿಸ್ ನಲ್ಲಿ ಕೆಲಸಕ್ಕೆಂದು ವೇಣುಗೋಪಾಲ್ ಅವರು ರಾಜ್ ಕುಮಾರ್, ಚಂದನ್ ರನ್ನು ಸದ್ರಿ ಸ್ಥಳದಲ್ಲಿ ಬಿಟ್ಟು ಹೋಗಿದ್ದು, ಸಂತೋಷ್, ಹರ್ಷವರ್ಧನ್, ನಾಗರಾಜ್ ಕನ್ಸ್ಟ್ರಕ್ಷನ್ ನಡೆಯುತ್ತಿರುವ ಸ್ಥಳದ ಸಿಮೆಂಟ್ ಗೋಡೆಯ ಹೊರ ಭಾಗಕ್ಕೆ ವಾಟರ್ ಪ್ರೂಫ್ ಕೆಮಿಕಲ್ ಸ್ಪ್ರೇ ಮಾಡಲು ತಿಳಿಸಿದ್ದು, ಜು. 3 ರಂದು ಕೆಮಿಕಲ್ ಸ್ಪ್ರೇ ಮಾಡುತ್ತಿರುವಾಗ ಗೋಡೆಯ ಜೊತೆಯಲ್ಲೇ ಇದ್ದ ಮಣ್ಣಿನ ಬರೆ ಒಮ್ಮೇಲೆ ಜರಿದು ಬಿದ್ದಿದ್ದು, ಇಬ್ಬರು ಮಣ್ಣಿನಡಿ ಸಿಲುಕಿದ್ದು, ಸ್ವಲ್ಪ ಸಮಯದ ಬಳಿಕ ರಾಜ್ ಕುಮಾರ್ ರನ್ನು ಹೊರ ತೆಗೆಯಲಾಗಿದ್ದು, ಬಳಿಕ ಕೆಲ ಸಮಯದ ಕಾರ್ಯಾಚರಣೆ ನಡೆಸಿ ಚಂದನ್ ರನ್ನು ಹೊರ ತೆಗೆಯಲಾಗಿದ್ದು, ಈ ವೇಳೆಗಾಗಲೇ ಆತ ಸಾವನ್ನಪ್ಪಿದ್ದು, ಕೆಲಸ ಮಾಡುವ ಸ್ಥಳದಲ್ಲಿ ಶರೀರಕ್ಕೆ ಗಾಯ ಅಥವಾ ಸಾವು ತರಬಹುದೆಂಬ ತಿಳುವಳಿಕೆ ಇದ್ದರೂ ಸಹ ಉದ್ದೇಶಪೂರ್ವಕವಾಗಿ ಯಾವುದೇ ಮುಂಜಾಗ್ರತೆ ಕ್ರಮಕೈಗೊಳ್ಳದೆ ಕೆಲಸ ಮಾಡಲು ತಿಳಿಸಿದ್ದು, ಈ ಅಜಾಗರೂಕತೆಗೆ ಕಾರಣರಾದ ಪ್ರೊಜೆಕ್ಟ್ ಮ್ಯಾನೇಜರ್ ಹರ್ಷವರ್ಧನ್, ಸೈಟ್ ಇನ್ ಚಾರ್ಜ್ ಸಂತೋಷ್, ನಾಗರಾಜ್, ಕೆಲಸಕ್ಕೆ ಕರೆ ತಂದು ಬಿಟ್ಟ ವೇಣುಗೋಪಾಲ್ ಹಾಗೂ ಇತರರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್, 2023 (u/s-105, 125(a), 125(b) ರಂತೆ ಪ್ರಕರಣ ದಾಖಲಾಗಿದೆ.



























