ಪುತ್ತೂರು : ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಪೂಡಾ) ಅಧ್ಯಕ್ಷ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅಧಿಕಾರ ವಹಿಸಿ ಕೇವಲ ಒಂದು ತಿಂಗಳ ಕಳೆಯುವುದರೊಳಗೇ ಭಾಸ್ಕರ ಕೋಡಿಂಬಾಳ ರಾಜೀನಾಮೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷ ನನಗೆ ಹಲವಾರು ಹುದ್ದೆ ನೀಡಿದೆ, ಅದನ್ನು ನಿಭಾಯಿಸಿದ್ದೇನೆ. ಇತ್ತೀಚೆಗೆ ಪುಡಾ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಶಾಸಕರೇ ನೇಮಕ ಮಾಡಿದ್ದರು. ಆದರೆ ಅವರೇ ಮೊನ್ನೆ ಬೆಂಗಳೂರಿನಿಂದ ನಿಮ್ಮ ಕೆಲಸ ಸಾಕಾಗುವುದಿಲ್ಲ ಎಂದು ಕರೆ ಮಾಡಿ ತಿಳಿಸಿದ್ದಾರೆ. ಇದು ನನಗೆ ತುಂಬಾ ಬೇಸರಗೊಂಡು ಮೂರು ದಿನ ಕಳೆದು ನಾನು ಸರಕಾರಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದು ಪುಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಅಧಿಕಾರ ವಹಿಸಿ ಒಂದು ತಿಂಗಳಲ್ಲಿ ಪುತ್ತೂರಿನ ಜನತೆಯ ಪ್ರಮುಖ ಸಮಸ್ಯೆಯಾದ ಕಟ್ ಕನ್ವರ್ಷನ್ ಬಗ್ಗೆ ಸಭೆ ನಡೆಸಲಾಗಿತ್ತು. ಈ ವಿಚಾರವನ್ನು ಸರಕಾರದ ಗಮನಕ್ಕೆ ತರಲೂ ಪ್ರಯತ್ನಿಸಲಾಗಿತ್ತು. ಆದರೆ ಈ ನಡುವೆಯೇ ಶಾಸಕರು ನನ್ನ ಬಗ್ಗೆ ಅಸಮಾಧಾನಪಟ್ಟಿದ್ದಾರೆ. ಈ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಸರಿಯಾಗಿ ಕೆಲಸ ಮಾಡುವ ವಾತಾವರಣ ಇಲ್ಲದ ಕಾರಣ ರಾಜೀನಾಮೆ ನೀಡಿದ್ದೇನೆ ಎಂದರು.



























