ಲಕ್ನೋ : ಎಲ್ಲರು ಆಶ್ಚರ್ಯ ಪಡುವಂತಹ ಸಂಗತಿಯೊಂದು ನಡೆದಿದ್ದು, ಮದುವೆ ಆಗಬೇಕಿದ್ದ ಗಂಡಿನ ತಂದೆ ಹಾಗೂ ಹೆಣ್ಣಿನ ತಾಯಿ ನಡುವೆ ಪ್ರೇಮಾಂಕುರವಾಗಿ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಈ ಘಟನೆ ನಡೆದಿದೆ.
ಮದುವೆ ಗಂಡಿನ ತಂದೆ ಶಕೀಲ್ಗೆ 10 ಮಕ್ಕಳಿದ್ದು, ಅತ್ತ ವಧುವಿನ ತಾಯಿ (35 ವರ್ಷಗಳು)ಗೆ 6 ಮಕ್ಕಳಿವೆ. ಎರಡು ತಿಂಗಳ ಹಿಂದೆ ಈ ಎರಡು ಕುಟುಂಬದ ನಡುವೆ ಮಕ್ಕಳ ಮದುವೆ ಬಗ್ಗೆ ಚರ್ಚೆ ನಡೆದು ನಿಶ್ಚಿತಾರ್ಥ ಮಾಡಿ ಮುಗಿಸಿದ್ದರು. ಅದರಂತೆ ಮದುವೆ ದಿನಾಂಕವನ್ನು ನಿಗದಿ ಮಾಡಿದ್ದರು. ಜುಲೈ 17 ಅಂದರೆ ಇಂದು ಮದುವೆಯಾಗಬೇಕಿತ್ತು. ಆದರೆ ಎರಡು ತಿಂಗಳಿಂದಲೂ ಮದುವೆ ನೆಪದಲ್ಲಿ ಇಬ್ಬರು ಪರಸ್ಪರ ಮೊಬೈಲ್ನಲ್ಲಿ ಮಾತನಾಡುತ್ತಾ ಭೇಟಿ ಕೂಡ ಆಗಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿ ಮಕ್ಕಳ ಮದುವೆ ಬಗ್ಗೆ ಚಿಂತಿಸದೇ ಓಡಿ ಹೋಗಿದ್ದಾರೆ ಎಂದು ಹೇಳಿದ್ದಾರೆ.
ದಿನಾಂಕ ನಿಗದಿಯಂತೆ ಇಂದು ಮಕ್ಕಳ ಮದುವೆಯಾಗಬೇಕಿತ್ತು. ಇದಕ್ಕೂ ಮೊದಲೇ ವರನ ತಂದೆ ಹಾಗೂ ವಧುವಿನ ತಾಯಿ ಇಬ್ಬರು ಮನೆ ಬಿಟ್ಟು ಓಡಿ ಹೋಗಿದ್ದು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಸದ್ಯ ಈ ವಿಷ್ಯ ಗೊತ್ತಾಗುತ್ತಿದ್ದಂತೆ ಆ ಮಹಿಳೆ ಗಂಡ ಶಾಕ್ ಆಗಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಹೆಣ್ಣಿನ ತಂದೆ, ನನ್ನ ಹೆಂಡತಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಕೊತ್ವಾಲಿ ಗಂಜ್ದುಂದ್ವಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.