ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರ ಜನಪರ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ. ಮುಖ್ಯಮಂತ್ರಿಗಳು ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ “ ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಧ್ಯೇಯ ವಾಕ್ಯದಂತೆ ವಿಶ್ವಾಸಾರ್ಹ ಆಡಳಿತವನ್ನು ನೀಡುತ್ತಿದ್ದು, ಇದರಿಂದ ಹತಾಶವಾದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಕ್ರೈಸ್ತ ಸಮುದಾಯವನ್ನು ಎತ್ತಿಕಟ್ಟುವ ಕೆಲಸದಲ್ಲಿ ನಿರತವಾಗಿದೆ ಎಂದು ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜೋಯ್ಲೆಸ್ ಡಿಸೋಜ ಆರೋಪಿಸಿದ್ದಾರೆ.
ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಮಾತಿನಂತೆ 2011ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರು ಕರ್ನಾಟಕದ ಇತಿಹಾಸದಲ್ಲಿ ಮೊಟ್ಟಮೊದಲಿಗೆ ರಾಜ್ಯದ ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸಿದ್ದರು. ಆ ಬಳಿಕ 2020ರಲ್ಲಿ ಮತ್ತೆ ಅನುದಾನವನ್ನು ಮೀಸಲಿಡುವ ಮೂಲಕ ಅತ್ಯಂತ ಹೆಚ್ಚು ಅನುದಾನವನ್ನು ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ನೀಡಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಿಂದ ಮತಬ್ಯಾಂಕ್ ರಾಜಕೀಯ
ಕಾಂಗ್ರೆಸ್ ಪಕ್ಷದ ಐವಾನ್ ಡಿಸೋಜಾ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾಗಿದ್ದ ಐವಾನ್ ಅವರಿಗೆ ಅಂದು ಕ್ರೈಸ್ತ ಸಮುದಾಯ ನೆನಪಾಗಲೇ ಇಲ್ಲ. ಕೇವಲ ಪ್ರಚಾರಕ್ಕಾಗಿ ಚುನಾವಣೆಗಾಗಿ ಭಾಷಣ ಮಾಡುವ ಇವರಿಂದ ಕ್ರೈಸ್ತ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನರಿತ ಜನತೆ ಇಂದು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಕ್ರೈಸ್ತ ಸಮುದಾಯದ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸರ್ಕಾರದ ಕಡೆಗೆ ಬೆರಳು ತೋರಿಸುವ ಕಾಂಗ್ರೆಸ್, ತಾನು ಅಧಿಕಾರದಲ್ಲಿದ್ದಾಗ ಕ್ರೈಸ್ತ ಸಮುದಾಯಕ್ಕೆ ಯಾವ ಕೊಡುಗೆ ನೀಡಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸವಾಲೆಸೆದರು. ಆದ್ದರಿಂದ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಗೆ ಅನುದಾನವನ್ನು ನೀಡಿದ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕ್ರೈಸ್ತ ಸಮುದಾಯ ಬೆಂಬಲಿಸುತ್ತಿರುವುದು ಇತ್ತೀಚೆಗೆ ನಡೆದ ಚುನಾವಣೆಗಳಿಂದ ಸಾಬೀತಾಗಿದೆ. ಇದರಿಂದ ಹತಾಶರಾಗಿರುವ ಕಾಂಗ್ರೆಸ್ ಪಕ್ಷದವರು, ಸಾಮರಸ್ಯದಿಂದ ಬದುಕುತ್ತಿರುವ ಜನತೆಯನ್ನು ಸಮುದಾಯದ ವಿಚಾರದಲ್ಲಿ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ, ತನ್ಮೂಲಕ ಅಶಾಂತ ವಾತಾವರಣ ನಿರ್ಮಾಣಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ನ ಕುಬುದ್ಧಿಯನ್ನು ನಾಡಿನ ಕ್ರೈಸ್ತ ಸಮುದಾಯ ಅರ್ಥಮಾಡಿಕೊಂಡಿದೆ. ಇಂತಹ ಸುಳ್ಳುಗಳಿಗೆ ನಾಡಿನ ಜನತೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಜೋಯ್ಲೆಸ್ ಡಿಸೋಜ ವಿಶ್ವಾಸ ವ್ಯಕ್ತಪಡಿಸಿದರು.