ರಾಜ್ಯದ ಸರಕಾರಿ ಶಾಲೆ ಮತ್ತು ಕಾಲೇಜು ಕ್ಯಾಂಪಸ್ ಗಳಲ್ಲಿ ಧಾರ್ಮಿಕ ಆಚರಣೆ ಸೇರಿದಂತೆ ಶೈಕ್ಷಣಿಕೇತರ ಚಟುವಟಿಕೆ ನಡೆಸದಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಇದು ಭಾರೀ ಸಂಚಲನವನ್ನೇ ಹುಟ್ಟುಹಾಕಿದೆ. ಇದರಿಂದ ಸಾರ್ವಜನಿಕ ಕೃಷ್ಣಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಣೆಯ ಸಂಘಟಕರು ಗೊಂದಲದಲ್ಲಿದ್ದಾರೆ.
ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ 2013ರ ಫೆ.7 ರಂದು ಮತ್ತು 2023ರ ಡಿ.1ರಂದು ರಾಜ್ಯದ ಎಲ್ಲ ಡಿಡಿಪಿಐ ಕಚೇರಿಗಳಿಗೆ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಕಟ್ಟಡ ಅಥವಾ ಶಾಲಾ ಮೈದಾನ ಅನುಮತಿ ನೀಡಬಾರದೆಂದು ಸುತ್ತೋಲೆ ಬಂದಿತ್ತು. ಈ ಆಧಾರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಡಿಡಿಪಿಐ ವೆಂಕಟೇಶ್ ಪಟಗಾರ ಅವರು ಜು.16ರಂದು ಜ್ಞಾಪನಾ ಪತ್ರವನ್ನು ಎಲ್ಲ ಬಿಇಒಗಳಿಗೆ ರವಾನಿಸಿದ್ದಾರೆ.
ಜ್ಞಾಪನಾ ಪತ್ರದಲ್ಲಿ ಏನಿದೆ?
ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ, ಶಾಲಾ ಮೈದಾನ ಅಥವಾ ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಕ್ಕೆ ಬಳಸಬಾರದು ಮತ್ತು ಅನುಮತಿಯನ್ನು ನೀಡಬಾರದೆಂದು ಸೂಚಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಿತ ಶಾಲಾ ಮುಖ್ಯಸ್ಥರೇ ಹೊಣೆಯಾಗುತ್ತಾರೆ ಎಂದು ಜ್ಞಾಪನಾ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಬಿಜೆಪಿಯಿಂದ ಹೋರಾಟ :
ರಾಜ್ಯಾದ್ಯಂತ ಹಲವು ದಶಕಗಳಿಂದ ಶಾಲೆಯ ಕ್ಯಾಂಪಸ್, ಶಾಲಾ ಕಟ್ಟಡದಲ್ಲಿ ಕೃಷ್ಣಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಈಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ರಾಜಕೀಯ ಮಾಡಲು ಹೊರಟಿದ್ದು, ಶಾಲಾ ವಠಾರದಲ್ಲಿ ಧಾರ್ಮಿಕ ಆಚರಣೆ ನಡೆಸದಂತೆ ಆದೇಶ ಹೊರಡಿಸಿದೆ. ಇದು ಖಂಡನೀಯವಾಗಿದ್ದು, ಈ ಹಿಂದೆ ನಿಗದಿತ ಸ್ಥಳದಲ್ಲೇ ಕಾರ್ಯಕ್ರಮ ಆಯೋಜಿಸುತ್ತೇವೆ. ಇದನ್ನು ತಡೆಯಲು ಬಂದರೆ ಸುಮ್ಮನಿರಲ್ಲ ಎಂದು ಬಿಜೆಪಿ ತಾಕೀತು ಮಾಡಿದೆ. ಇದೇ ರೀತಿ ಜಿಲ್ಲಾದ್ಯಂತ ಹೋರಾಟ ನಡೆಯುತ್ತಿದೆ.
ಬಿಜೆಪಿ ಸರಕಾರದಲ್ಲೇ ಆದೇಶ :
2013ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದು, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ‘ಶಿಕ್ಷಣೇತರ ಚಟುವಟಿಕೆ ನಡೆಸದಂತೆ ಆದೇಶ ಹೊರಡಿಸಿತ್ತು’. ಆದೇ ಆದೇಶದಡಿ ನಿಯಮದಂತೆ ದಕ್ಷಿಣ ಕನ್ನಡ ಶಿಕ್ಷಣಾಧಿಕಾರಿಯವರು ಬಿಇಒ ಮೂಲಕ ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಆದರೆ ಅಧಿಕಾರದಲ್ಲಿದ್ದಾಗ ಆದೇಶ ಹೊರಡಿಸಿದ್ದ ಬಿಜೆಪಿಯವರೇ ಈಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಈ ವಿವಾದವೂ ಜಿಲ್ಲೆಯಲ್ಲಿ ದಿನ ಹೋದಂತೆ ರಾಜಕೀಯ ಬಣ್ಣ ಪಡೆದು ಕಾವೇರತೊಡಗಿದೆ.
