ಶಿವಮೊಗ್ಗ : ಈ ಇಬ್ಬರು ಸ್ನೇಹಿತರಾಗಿ, ಪ್ರೇಮಿಗಳಾಗಿ ತಿರುಗಾಡಿದವರು. ಸಮ್ಮತಿಯಿಂದಲೇ ಶುರುವಾದ ಪ್ರೇಮವಿದು. ಆದ್ರೆ, ಕೊನೆಗೆ ಎಂಡ್ ಆಗಿದ್ದು ಕೊಲೆಯಲ್ಲಿ.
ಅದು ಪ್ರಿಯಕರನೇ ಪ್ರಿಯತಮೆಯನ್ನ ಕೊಂದು ಬಿಟ್ಟಿದ್ದಾನೆ. ಹಾಗಾದ್ರೆ, ಪ್ರೀತಿಸುತ್ತಿದ್ದವರ ಮಧ್ಯೆ ಏನಾಯ್ತು? ಇವರ ಪ್ರೀತಿ ಪವಿತ್ರ ಬಂಧನವಾಗಿತ್ತಾ? ಅನವಶ್ಯಕ ಕಿರಿಕಿರಿಯಾಗಿತ್ತಾ? ಕೈ ತುತ್ತು ತಿನ್ನಿಸಿದವನ ಕೈ, ಆಕೆಯ ಉಸಿರು ನಿಲ್ಲಿಸಿದ್ಯಾಕೆ?
ಕಳೆದ ಜುಲೈ 2ರಂದು ಹೀಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಒಂದು ಯುವತಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ನನ್ನ ಮಗಳು ಕಾಣಿಸ್ತಿಲ್ಲ, ಹುಡುಕಿ ಕೊಡಿ ಅಂತಾ ದೂರು ಕೊಟ್ಟಿದ್ದರು. ಆ ದೂರಿನಲ್ಲಿ ಅವರು, 2 ನೇ ತಾರೀಖು ನನ್ನ ಮಗಳು ಆಸ್ಪತ್ರೆ ತರಬೇತಿಗೆಂದು ಮನೆಯಿಂದ ಹೋಗಿದ್ದಾಳೆ. ಅವತ್ತು ಸಂಜೆ ಕಾಲ್ ಮಾಡಿ, ನನಗೆ ಸಂಜೆ ಮೀಟಿಂಗ್ ಇದೇ. ಲೇಟಾಗಿ ಬರ್ತೀನಿ ಅಂತಾ ಹೇಳಿದ್ದಾಳೆ. ಆದ್ರೆ ರಾತ್ರಿಯಾದ್ರೂ ಬರೋದಿಲ್ಲ. ಇದರಿಂದ ಗಾಬರಿಯಾಗುವ ತಾಯಿ, ಯುವತಿ ಪ್ರೀತಿಸುತ್ತಿದ್ದ ಸೃಜನ್ ಎಂಬಾತನಿಗೆ ಕರೆ ಮಾಡಿ, ನನ್ನ ಮಗಳು ನಿನ್ನ ಮೀಟ್ ಮಾಡಿದ್ದಳಾ? ಅವಳು ಇನ್ನೂ ಮನೆಗೆ ಬಂದಿಲ್ಲ ಅಂತಾ ಹೇಳ್ತಾರೆ.
ಸೃಜನ್, ಯುವತಿ ಮಧ್ಯಾಹ್ನ ಮೀಟ್ ಮಾಡಿದಳು. ಆಕೆೆ ಬ್ಲ್ಯೂಟೂತ್ ಹೆಡ್‌ಫೋನ್ ಬೇಕಿತ್ತು. ಕೊಡಿಸಿ ಬಸ್ ಹತ್ತಿ ಕಳುಹಿಸಿದೆ ಅಂತಾ ಹೇಳಿದ್ದಾನೆ. ಇದರಿಂದ ಭಯಭೀತರಾಗಿ ಯುವತಿ ತಾಯಿ, ಕೊಪ್ಪ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಾರೆ.
ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸುತ್ತಾರೆ. ಆದ್ರೆ, ಜುಲೈ 21ರವರೆಗೂ ಪೊಲೀಸರಿಗೆ ಯಾವುದೇ ಸುಳಿವು ಸಿಗೋದಿಲ್ಲ. ಆ ನಂತರ ಸಿಡಿಆರ್ ತೆಗೆಸಿದಾಗ, ಯುವತಿ ಜೊತೆ ಸೃಜನ್ ಎಂಬಾತ ಹೆಚ್ಚು ಸಂಪರ್ಕದಲ್ಲಿರೋದು ಪತ್ತೆಯಾಗುತ್ತದೆ. ಈತ ಆಕೆಯನ್ನ ಪ್ರೀತಿಸುತ್ತಿದ್ದ ಅನ್ನೋ ಮಾಹಿತಿ ಕುಟುಂಬ ಮತ್ತು ಆತನಿಂದಲೂ ಗೊತ್ತಾಗುತ್ತದೆ.
ಕೊಲೆಯಾದ ಯುವತಿ ಕೊನೆಯ ಲೋಕೇಷನ್ ಶಿವಮೊಗ್ಗದ ಹೆದ್ದಾರಿಪುರ ಕೊನೆಯಾಗಿರುತ್ತದೆ. ಅದೇ ಸಂದರ್ಭದಲ್ಲಿ ಸೃಜನ್ ಕೂಡ ಅಲ್ಲಿಗೆ ಬಂದಿರೋದು ಕಾಲ್ ಡೀಟೆಲ್ಸ್ ರೆಕಾರ್ಡ್‌ನಿಂದ ಪತ್ತೆಯಾಗಿರುತ್ತದೆ. ಹೀಗಾಗಿ ಅನುಮಾನಗೊಂಡ ಪೊಲೀಸರು, ಆತನನ್ನ ಜುಲೈ 21ರಂದು ಸ್ಟೇಷನ್‌ಗೆ ಕರೆಸಿ ವಿಚಾರಣೆ ನಡೆಸುತ್ತಾರೆ.
ಖಾಸಗಿ ಕಂಪನಿಯಲ್ಲಿ ಫೈನಾನ್ಸ್ ಕಲೆಕ್ಷನ್ ಮಾಡ್ತಿದ್ದ ಸೃಜನ್, ಅರ್ಜೆಂಟಾಗಿ ನನಗೆ ಕೆಲಸವಿದೆ. ಮರುದಿನ ಠಾಣೆಗೆ ಬರ್ತೀನಿ ಅಂತಾ ಹೇಳಿ ಹೋಗುತ್ತಾನೆ. ಅದೇ ರೀತಿ ಸೃಜನ್, ಮರು ದಿನ ಅಂದ್ರೆ 22ನೇ ತಾರೀಖು ಸ್ಟೇಷನ್‌ಗೆ ಬಂದು ತಾನೇ ಕೊಲೆ ಮಾಡಿರೋದಾಗಿ ಒಪ್ಪಿಕೊಳ್ಳುತ್ತಾನೆ. ಏಕೆ ಅಂತಾ ಕೇಳಿದಾಗ ಇಡೀ ಪುರಾಣ ಬಾಯ್ಬಿಡುತ್ತಾನೆ.
ಶಿವಮೊಗ್ಗದ ಸಾಗರ ಮೂಲದ ಸೃಜನ್, ಕೊಪ್ಪಳಕ್ಕೆ ಫೈನಾನ್ಸ್ ವಸೂಲಿಗೆ ಬರ್ತಿದ್ದ. ಸುಮಾರು 2 ವರ್ಷಗಳ ಹಿಂದೆ ಫೈನಾನ್ಸ್ ಕೆಲ್ಸಕ್ಕೆಂದು ಈತ ಕೊಪ್ಪಕ್ಕೆ ಬಂದಿದ್ದ. ಅಸಲಿಗೆ ಕೊಲೆಯಾದ ಯುವತಿ ತಾಯಿಯೇ ಸಾಲ ಪಡೆದಿರುತ್ತಾರೆ. ಆ ಸಾಲ ವಸೂಲಾತಿಗೆೆಂದೇ ಸೃಜನ್ ಇವರ ಮನೆಗೆ ಬಂದಿರ್ತಾನೆ. ಅಲ್ಲಿ ಇವರಿಬ್ಬರ ಮೊದಲ ಪರಿಚಯವಾಗುತ್ತೆ. ಫೋನ್ ನಂಬರ್ ಕೂಡ ಎಕ್ಸ್‌ಚೇಂಜ್ ಆಗುತ್ತದೆ. ಅಷ್ಟೇ ಅಲ್ಲ, ತೀರ್ಥಹಳ್ಳಿಯಿಂದ ಹೊನ್ನಾಳಿ ಶಾಖೆಗೆ ಸೃಜನ್ ವರ್ಗಾವಣೆಗೊಳ್ಳುತ್ತಾನೆ. ಆ ನಂತರ ಇವರಿಬ್ಬರ ನಡುವಿನ ಪ್ರೀತಿ ಪ್ರೇಮ ಗಟ್ಟಿಯಾಗುತ್ತಾ ಹೋಗುತ್ತದೆ. ಇಬ್ಬರು ಕೂಡ ಪರಸ್ಪರ ಪ್ರೀತಿಸ್ತಾ ಇರ್ತಾರೆ.
ಲವ್ ಮಾಡೋರ ಗುರಿಯೇ ಮದ್ವೆಯಾಗೋದು. ಹಾಗಾಗಿ ಈ ಹುಡುಗಿ ಕೂಡ ಸೃಜನ್‌ಗೆ ಮದ್ವೆಯಾಗೋಣ ಅಂತಾ ಕೇಳುತ್ತಾರೆ. ಅದಕ್ಕೆ ಸೃಜನ್ ಸದ್ಯಕ್ಕೆ ಬೇಡ, ಇನ್ನೆರೆಡು ವರ್ಷ ಆದ್ಮೇಲೆ ಆಗೋಣ ಅಂತಾ ಹೇಳುತ್ತಾನೆ. ಆದ್ರೆ, ಹುಡುಗಿ ಇವನ ಮಾತು ಕೇಳೋದೇ ಇಲ್ಲ. ನಮ್ಮ ಮನೆಯಲ್ಲಿ ನಾನೇ ದುಡಿಯಬೇಕು. ಬೇರೆ ಯಾರು ಇಲ್ಲ, ಹಾಗಾಗಿ ಮನೆಯ ಜವಾಬ್ದಾರಿಯಿದೆ. ವೇಯ್ಟ್ ಮಾಡು ಅಂತಾ ಸೃಜನ್ ಹೇಳ್ತಾನೇ ಇರ್ತಾನೇ. ಆದ್ರೆ, ಯುವತಿ ಮಾತ್ರ ಕೇಳೋದೇ ಇಲ್ಲ.
ಮದ್ವೆಗೆ ಹಠಕ್ಕೆ ಬಿದ್ದಿದ್ದ ಯುವತಿ ಜುಲೈ 2ರಂದು ಕರೆ ಮಾಡಿ ನಾನು ನಿನ್ನನ್ನ ಭೇಟಿ ಮಾಡ್ಬೇಕು ಅಂತಾ ಹೇಳುತ್ತಾಳೆ. ಆದ್ರೆ, ಸೃಜನ್ ಬೇಡ ಅಂತಾನ ಹೇಳ್ತಾನೇ. ಆದ್ರೆ, ಇದಕ್ಕೆ ಸೊಪ್ಪು ಹಾಕದ ಹುಡುಗಿ ಸೀದಾ ಸಾಗರದ ಆನಂದಪುರಕ್ಕೆ ಹೋಗುತ್ತಾಳೆ. ಈಕೆ ಹೋಗೋದು ಮಧ್ಯಾಹ್ನವಾದರೂ, ಕೆಲಸವಿದ್ದ ಕಾರಣ ಸೃಜನ್ ಈಕೆಯ ಭೇಟಿ ಮಾಡೋದಿಲ್ಲ. ಮಧಾಹ್ನ ಬಂದು ಈಕೆಯನ್ನ ಪಿಕಪ್ ಮಾಡ್ಕೊಂಡು ಸೀದಾ ಹೆದ್ದಾರಿಪುರಕ್ಕೆ ಹೋಗಿ ಬಿಡುತ್ತಾನೆ.
ಅಲ್ಲಿಯೂ ಕೂಡ ಯುವತಿ ಮದ್ವೆಗೆ ಪಟ್ಟು ಹಿಡಿಯುತ್ತಾಳೆ. ಆದ್ರೆ, ಇದಕ್ಕೆ ಸೃಜನ್ ನೋ ಅಂತಾನೇ ಉತ್ತರ ಕೊಡ್ತಾನೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಕೋಪಗೊಂಡ ಸೃಜನ್ ಅಲ್ಲಿಂದ ಆಕೆಯನ್ನ ಬಿಟ್ಟು ಹೋಗಿಬಿಡ್ತಾನೆ. ಆ ನಂತರ ಯಾಕೋ ಏನೋ ಮತ್ತೆ ವಾಪಸ್ ಬರ್ತಾನೆ. ಹೆದ್ದಾರಿಪುರದಲ್ಲಿ ಮತ್ತೆ ಇವ್ರು ಮೀಟ್ ಮಾಡ್ತಾರೆ. ಮತ್ತೆ ಗಲಾಟೆಯಾಗುತ್ತದೆ. ಆದ್ರೆ, ಈ ಬಾರಿ ಗಲಾಟೆ ವಿಕೋಪಕ್ಕೆ ಹೋಗಿ, ಸಿಟ್ಟಿಗೆದ್ದ ಸೃಜನ್ ಏಕಾಏಕಿ ಯುವತಿಗೆ ಬಲವಾಗಿ ಹೊಡೆದ್ಬಿಟ್ಟಿದ್ದಾನೆ. ಕೆಳಗೆ ಬಿದ್ದ ಯುವತಿಯ ಕುತ್ತಿಗೆಗೆ ಬಲಗಾಲನ್ನು ಇಟ್ಟು, ಸಾಯಿಸಿದ್ದಾನೆ ಎನ್ನಲಾಗಿದೆ.
ಅಲ್ಲಿಂದ ವಾಪಸ್ ಆಗಿ, ಬ್ಯಾಂಕ್‌ಗೆ ಹೋಗಿ ಹಣವನ್ನೆಲ್ಲಾ ಕಟ್ಟುತ್ತಾನೆ. ಬಳಿಕ ತನ್ನ ಕಾರನ್ನ ಎತ್ತಿಕೊಂಡು ಹೋಗಿ, ಯುವತಿ ಮೃತದೇಹವನ್ನ ಕಾರಿನ ಡಿಕ್ಕಿಗೆ ಹಾಕ್ಕೊಂಡು, ಆನಂದಪುರದ ರೈಲ್ವೆಟ್ರ್ಯಾಕ್ ಬಳಿ ಶವ ಹೂತುಹಾಕುತ್ತಾನೆ. ಆ ನಂತರ ಏನೂ ಗೊತ್ತಿಲ್ಲದವನಂತೆ ನಾಟಕ ಆಡುತ್ತಾನೆ. ಬಳಿಕ ಪೊಲೀಸರ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಸೃಜನ್ ಪದೇ ಪದೇ ಹುಡುಗಿ ಮೃತದೇಹ ಹೂತಿದ್ದ ಜಾಗಕ್ಕೆ ಭೇಟಿ ಕೊಡುತ್ತಾ ಇದ್ದನಂತೆ. ದಿನಗಳು ಕಳೆದಿದೆ. ಹೆತ್ತವರು ಮಗಳು ನಾಪತ್ತೆ ಅಂತಾ ತಿಳಿದು ದೂರು ಕೊಟ್ಟಿದ್ದಾರೆ. ಅತ್ತ, ಕೊಪ್ಪ ಪೊಲೀಸರು ಸಿಡಿಆರ್ ಪರಿಶೀಲನೆ ಮಾಡಿದಾಗ, ಸೃಜನ್ ಕೈವಾಡ ಬಯಲಾಗಿದೆ.
ಈ ಬೆನ್ನಲ್ಲೇ ಸೃಜನ್ನ ಅರೆಸ್ಟ್ ಮಾಡಿರುವ ಪೊಲೀಸರು ಹೂತು ಹಾಕಿದ್ದ ಜಾಗದಲ್ಲಿ ಸ್ಥಳ ಮಹಜರು ಮಾಡಿ ಯುವತಿಯ ಮೃತದೇಹವನ್ನು ಹೊರ ತೆಗೆದಿದ್ದಾರೆ. ಹೂತಿಟ್ಟ ಜಾಗದಲ್ಲಿ ಶವ ಹೊರ ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.