ಪುತ್ತೂರು : ಈಶ್ವಮಂಗಲ ಪಂಚೋಡಿಯಲ್ಲಿ ಜು.28ರಂದು ರಾತ್ರಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ಪೊಲೀಸರು ಮನೆಯಲ್ಲಿದ್ದ ಯುವಕನಿಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈಶ್ವರಮಂಗಲ ಪಂಚೋಡಿ ನಿವಾಸಿ, ಪುತ್ತೂರು ಕಂಪೆನಿಯೊಂದರಲ್ಲಿ ಎಸಿ ಟೆಕ್ನಿಷಿಯನ್ ಆಗಿರುವ ಭ್ರಮೀಷ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು.
ಜು.28 ರಂದು ರಾತ್ರಿ ಭ್ರಮೀಷ್ ಮನೆಯಲ್ಲಿ ಮಲಗಿದ್ದು, ಈ ವೇಳೆ ಬಾಗಿಲು ಬಡಿದ ಶಬ್ದ ಆಯಿತು. ಬಾಗಿಲು ತೆರೆದಾಗ ಲೈಟ್ ಹಾಕಿ ಮನೆಯಲ್ಲಿ ಯಾರು ಇಲ್ಲವಾ ಎಂದು ಕೇಳಿದರು. ಯಾರು ಇಲ್ಲ ಎಂದು ಹೇಳಿದಾಗ ನನ್ನ ತಂದೆಗೆ ಅವಾಚ್ಯವಾಗಿ ಬೈದು ನನ್ನ ಕಾಲರು ಹಿಡಿದು ಎಳೆದು ನಾಲ್ವರು ಪೊಲೀಸರು ಸೇರಿ ನನಗೆ ಹಲ್ಲೆ ನಡೆಸಿದರು. ಮನೆಯ ಬಳಿ ಪೊಲೀಸ್ ವಾಹನ ಇತ್ತು. ಅಲ್ಲಿಗೆ ಕರೆದುಕೊಂಡು ಹೋದಾಗ ನಾನೇನು ತಪ್ಪು ಮಾಡಿದ್ದೇನೆ ಎಂದು ಎಸ್.ಐ ಅವರಲ್ಲಿ ಕೇಳಿದಾಗ, ನೀನು ಗಲಾಟೆಯಲ್ಲಿ ಇಲ್ಲವಾ?, ಹಾಗಾದರೆ ಹೋಗು ಎಂದು ಮನೆಗೆ ಕಳಿಸಿದರು. ಆದರೆ ಪೊಲೀಸರ ಲಾಠಿ ಏಟಿನಿಂದ ನನ್ನ ಎಡ ಕೈಗೆ ಬಲವಾದ ಗಾಯವಾದ್ದರಿಂದ ನಾನು ಸ್ಥಳೀಯ ಜಾಗರಣ ವೇದಿಕೆ ಆಂಬ್ಯುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದೇನೆ ಎಂದು ತಿಳಿಸಿದ್ದಾರೆ.
ಪಂಚೋಡಿ ವೈನ್ ಶಾಪ್ ಬಳಿ ಗಲಾಟೆ ನಡೆದಿತ್ತು. ಆದರೆ ನನಗೆ ಈ ವಿಚಾರ ಗೊತ್ತಿರಲಿಲ್ಲ. ನಾನು ಮನೆಯಲ್ಲಿದ್ದೆ. ಪೊಲೀಸರು ನನ್ನನ್ನು ಅದೇ ವಿಚಾರದಲ್ಲಿ ತಪ್ಪು ಮಾಹಿತಿಯಿಂದ ನನಗೆ ಹಲ್ಲೆ ನಡೆಸಿದ್ದಾರೆ. ಆದರೆ ವಿಚಾರಣೆ ಮಾಡಬಹುದಿತ್ತು. ಅದನ್ನು ಮಾಡದೆ ಯಾವುದೇ ಮಾಹಿತಿ ಪಡೆಯದೇ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಭ್ರಮೀಷ್ ತಿಳಿಸಿದ್ದಾರೆ.
ಕತ್ತಿಯಿಂದ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ. ಪೊಲೀಸರಿಂದ ವ್ಯಕ್ತಿಗೆ ಹಲ್ಲೆ ಘಟನೆ ಮಾಹಿತಿಯಿಲ್ಲ ಎಂದು ಇಲಾಖಾ ಮಾಹಿತಿ ಲಭ್ಯವಾಗಿದೆ.