ಯಾವುದೇ ಪ್ರದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ, ಆರೋಗ್ಯ ಮುಂತಾದ ಮೂಲ ಸೌಕರ್ಯಗಳ ಅಭಿವೃದ್ಧಿ ನಿರ್ಣಾಯಕ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಪುತ್ತೂರಿನ ಸರ್ವತೋಮುಖ ಅಭಿವೃದ್ಧಿಗೆ ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಯ ಅನಿವಾರ್ಯತೆ ಇದೆ. ಜಿಲ್ಲೆಯಲ್ಲಿ ಅನೇಕ ಖಾಸಗಿ ಮೆಡಿಕಲ್ ಕಾಲೇಜುಗಳಿದ್ದರೂ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಮೆಡಿಕಲ್ ಶಿಕ್ಷಣದ ಕನಸಿಗಾಗಿ ಸರ್ಕಾರಿ ಮೆಡಿಕಲ್ ಕಾಲೇಜ್ ಅವಶ್ಯಕ.
ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜ್ ಗಾಗಿ ಅನೇಕ ಸಂಘ-ಸಂಸ್ಥೆಗಳು ಅನೇಕ ವರ್ಷಗಳಿಂದ ಅವಿರತವಾಗಿ ಶ್ರಮಿಸಿವೆ. ಅದರಲ್ಲೂ ಕನ್ನಡ ಸೇನೆ ಕರ್ನಾಟಕ ಇದರ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ್ ಸಾರಥ್ಯದಲ್ಲಿ ಕನ್ನಡ ಸೇನೆ ವೈದ್ಯಕೀಯ ಕಾಲೇಜುಗಾಗಿ ಹೋರಾಡುತ್ತಾ ಬಂದಿದೆ. ಶ್ರೀಮತಿ ಶಕುಂತಲಾ ಶೆಟ್ಟಿ ಅವರು ಪುತ್ತೂರಿನ ಶಾಸಕರಾಗಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಸಂದರ್ಭ ಅದನ್ನು ಪುತ್ತೂರು ತಾಲೂಕಿಗೆ ನೀಡುವಂತೆ ಮುಖ್ಯಮಂತ್ರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಮತ್ತು ಆರೋಗ್ಯ ಸಚಿವರಿಗೆ ಕಾರ್ಮಿಕ ಸಂಘ ಮತ್ತು ಕನ್ನಡ ಸೇನೆ ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಸರ್ಕಾರ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ 40 ಎಕರೆ ಸ್ಥಳವನ್ನು ಮೆಡಿಕಲ್ ಕಾಲೇಜು ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮೀಸಲಿಟ್ಟಿತ್ತು.
ಆದರೆ ಪ್ರಸ್ತುತ ಮೆಡಿಕಲ್ ಕಾಲೇಜ್ ಗಾಗಿ ಮೀಸಲಿಟ್ಟ ಜಾಗವನ್ನು ಸೀಫುಡ್ ಪಾರ್ಕ್ ಸ್ಥಾಪನೆಗಾಗಿ ಬಳಸಲು ಸರ್ಕಾರ ಮುಂದಾಗಿದೆ. ಪುತ್ತೂರಿನ ಜನತೆಯ ಒಳಿತಿಗಾಗಿ ಸದಾ ಚಿಂತಿಸುತ್ತಾ ಪುತ್ತೂರಿಗೆ ಮೆಡಿಕಲ್ ಕಾಲೇಜ್ ಮಂಜೂರಾತಿಗೆ ಅನೇಕ ವರ್ಷಗಳಿಂದ ತನ್ನ ಹೋರಾಟಗಳ ಮೂಲಕ ಅವಿರತವಾಗಿ ಶ್ರಮಿಸಿದ ಚಂದ್ರಶೇಖರ್ ಎ. ಸಾರಥ್ಯದ ಕನ್ನಡ ಸೇನೆ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದು, ಕನ್ನಡ ಸೇನೆ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷ ಚಂದ್ರಶೇಖರ ಎ. ಅವರು ಈ ಸಂಬಂಧ ರಾಜ್ಯ ಕಂದಾಯ ಸಚಿವರಿಗೆ, ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರಿಗೆ ಮನವಿ ಸಲ್ಲಿಸಿದರು.
ಪುತ್ತೂರಿಗೆ ಮೆಡಿಕಲ್ ಕಾಲೇಜಿನ ಅಗತ್ಯವಿದೆ. ಹೀಗಾಗಿ ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿರಿಸಿದ ಜಮೀನನ್ನು ಸೀಫುಡ್ ಪಾರ್ಕ್ ಗಾಗಿ ಬಳಸಿಕೊಳ್ಳಬಾರದು. ಇದರ ಹೊರತಾಗಿಯೂ ಸಾರ್ವಜನಿಕರ ವಿರೋಧ ನಿರ್ಲಕ್ಷಿಸಿದರೆ, ಉಗ್ರ ಹೋರಾಟ ನಡೆಸಲಾಗುವುದು ಎಂದು ಚಂದ್ರಶೇಖರ್ ಎ. ಎಚ್ಚರಿಸಿದ್ದಾರೆ.