ಚಿಕ್ಕೋಡಿ : ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ಒಂದು ಹಿಡಿ ಅನ್ನ ಹಾಕಿದರು, ಉಸಿರಿರುವವರೆಗೆ ಅನ್ನ ಹಾಕಿದ ಮನೆಗೆ ಮಾಲೀಕರಿಗೆ ಸದಾ ನಿಯತ್ತು ಪ್ರೀತಿಯಾಚೆ ಬೇರೆನನ್ನೂ ಕೊಡುವುದಿಲ್ಲ. ನಾಯಿಯ ನಿಯತ್ತಿನ ಕಥೆಗಳು ನಾವು ಆಗಾಗ ಅಲ್ಲಲ್ಲಿ ಓದುತ್ತಲೇ ಇರುತ್ತೇವೆ. ಶ್ವಾನಗಳು ಹಾಗೆ ಹಲವು ಬಾರಿ ಸಾಕ್ಷಿಯಾಗಿವೆ. ಆದ್ರೆ ಇವತ್ತು ಹೇಳ ಹೊರಟಿರುವ ಶ್ವಾನ ನಿಯತ್ತಿನ ಕಥೆಯೇ ಅವೆಲ್ಲವುದಕ್ಕಿಂತ ವಿಭಿನ್ನ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರಣಿ ಅನ್ನೋ ಗ್ರಾಮದ ಕಮಲೇಶ್ ಎಂಬುವವರ ಶ್ವಾನ ಅವರನ್ನು ಮತ್ತು ಮನೆಯನ್ನು ಹುಡುಕಿಕೊಂಡು ಬರೋಬ್ಬರಿ 250 ಕಿಲೋಮೀಟರ್ ಪ್ರಯಾಣ ಮಾಡಿಕೊಂಡು ಬಂದಿದೆ.
ನಿಪ್ಪಾಣಿ ತಾಲೂಕಿನ ಮಗರಣಿ ಗ್ರಾಮಸ್ಥರಾದ ಜ್ಞಾನದೇವ ಕುಂಬಾರ್ ಅವರ ನೇತೃತ್ವದಲ್ಲಿ ಕಮಲೇಶ್ ಅನ್ನುವವರು ತಮ್ಮ ಶ್ವಾನ ಮೋತಿಯೊಂದಿಗೆ ಆಶಾಡ ಏಕಾದಶಿಯ ಹಿನ್ನೆಲೆ ಪಂಢರಪುರದ ದಿಂಡಿಗೆ ತೆರಳಿದ್ದರು. ಯಮಗರಣಿಯಿಂದ ಮಹಾರಾಷ್ಟ್ರದ ಪಂಡರಪುರದವರೆಗೂ ಅವರ ಮುದ್ದಿನ ಶ್ವಾನ ಮೋತಿ ಅವರೊಂದಿಗೆನೇ ಹೆಜ್ಜೆ ಹಾಕಿಕೊಂಡು ಹೋಗಿತ್ತು.
ಅಚಾನಕ್ಕಾಗಿ ಪಂಡರಪುರದಲ್ಲಿ ಮೋತಿ ದಾರಿತಪ್ಪಿಸಿಕೊಂಡಿದೆ. ಮಾಲೀಕ ಕಮಲೇಶ್ ಎಷ್ಟೇ ಹುಡುಕಿದರು ಮೋತಿ ಸಿಕ್ಕಿರಲೇ ಇಲ್ಲ. ಕೊನೆಗೆ ಭಾರವಾದ ಮನಸ್ಸಿನಿಂದ ಪಂಢರಿನಾಥ್, ಎಲ್ಲಿದ್ದರು ಅವನನ್ನು ನೀನೇ ಕಾಪಾಡು ಎಂದು ದೇವರ ಮೇಲೆ ಭಾರಹಾಕಿ ಒಲ್ಲದ ಮನಸ್ಸಿನಿಂದಲೇ ಪಂಢರಪುರದಿಂದ ನಿರ್ಗಮಿಸಿದ್ದರು.
4 ದಿನಗಳ ಬಳಿಕ ಪಂಢರಿನಾಥ ಕಮಲೇಶ್ ಅವರ ಬೇಡಿಕೆಯನ್ನು ಈಡೇರಿಸಿದ್ದ, ಕಳೆದು ಹೋಗಿದ್ದ ಮೋತಿ ಬರೋಬ್ಬರಿ 250 ಕಿಲೋಮೀಟರ್ ದೂರದಿಂದ ನಡೆದುಕೊಂಡು ವಾಪಸ್ ಕಮಲೇಶ್ ಅವರ ಮನೆಯನ್ನು ಸೇರಿತ್ತು. ಬೇರೆ ದಿಂಡಿಯವರ ಗುಂಪಿನೊಂದಿಗೆ ಹೆಜ್ಜೆ ಹಾಕುತ್ತಾ ಹಾಕುತ್ತಾ ಊರು ಸೇರಿಕೊಂಡಿತ್ತು ಶ್ವಾನ.
ಪಂಢರಪುರ ಟು ಯಮಗರಣಿ ಹೇಗಿತ್ತು ಪ್ರಯಾಣ?
ಪಂಢರಪುರಕ್ಕೆ ಭಕ್ತಿಯ ಪಥವನ್ನಿಟ್ಟುಕೊಂಡಿ ಹೋಗಿದ್ದ ಕಮಲೇಶ್ ವಾಪಸ್ ಬರುವಾಗ ಭಾರವಾದ ಹೆಜ್ಜೆಯನ್ನಿಟ್ಟುಕೊಂಡೇ ಮನೆಗೆ ಬಂದಿದ್ದರು. ಮುದ್ದಿನ ಮೋತಿ ಕಳೆದು ಹೋಗಿದ್ದು ಅವರ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿತ್ತು. ಆದ್ರೆ ನಾಲ್ಕು ದಿನ ಕಳೆದ ಬಳಿಕ ಸ್ವಂತ ಊರನ್ನು ಮನೆಯನ್ನು ಹುಡುಕಿಕೊಂಡು ಬಂದಿತ್ತು ಮೋತಿ, 250 ಕಿಲೋಮೀಟರ್ ಪ್ರಯಾಣವನ್ನು ಏಕಾಂಗಿಯಾಗಿ ನೀಗಿಸಿಕೊಂಡು ಮನೆಯ ಮುಂದೆ ಬಂದು ನಿಂತಾಗ ಎಲ್ಲರಿಗೂ ಆಶ್ಚರ್ಯದಿಂದ ಹುಬ್ಬೇರಿಸಿದ್ದರು. ಕಳೆದುಕೊಂಡು ಹೋಗಿದ್ದ ಮಗ ಮತ್ತೆ ಮನೆಗೆ ಬಂದ ಸಂಭ್ರಮ ಇಡೀ ಮನೆಯಲ್ಲಿ ಮಾತ್ರವಲ್ಲ ಊರಿನಲ್ಲಿಯೇ ತುಂಬಿತ್ತು.
ಶ್ವಾನಕ್ಕೆ ಹೂವಿನ ಹಾರ ಸಮರ್ಪಿಸಿ ಪ್ರೀತಿ ಮೆರೆದ ಗ್ರಾಮಸ್ಥರು
ಅಚ್ಚರಿ ಎಂಬಂತೆ, ಪವಾಡ ಎಂಬಂತೆ 250 ಕಿಲೋ ಮೀಟರ್ನಿಂದ ವಾಪಸ್ ಊರಿಗೆ ಬಂದ ಮೋತಿಯನ್ನು ಕಂಡು ಇಡೀ ಗ್ರಾಮಸ್ಥರೇ ಖುಷಿಯಿಂದ ಕುಣಿದಾಡಿದ್ದಾರೆ. ಇದು ಸಾಕ್ಷಾತ್ ಪಂಢರಿನಾಥನ ಪವಾಡ, ಅವನ ಪವಾಡದಿಂದಲೇ ಅಷ್ಟು ದೂರದಿಂದ ಶ್ವಾನ ಇಲ್ಲಿಯವರೆಗೂ ಬಂದಿದೆ ಎಂದು ಅದಕ್ಕೆ ಹೂವಿನ ಹಾರ ಹಾಕಿ ಪೂಜೆ ಮಾಡಿ ಭಕ್ತಿ ಮೆರೆದಿದ್ದಾರೆ.
ಪಂಢರಪುರದ ವಿಠಲ ದೇವರ ಜೊತೆ ಬಂದ ಶ್ವಾನವೆಂದು ಹಾರ ಹಾಕಿ ಕುಂಕಮ ಹಚ್ಚಿ ಭಕ್ತಿಪೂರ್ವಕವಾಗಿ ಶ್ವಾನವನ್ನು ಸ್ವಾಗತಿಸಿದ್ದಾರೆ.