ಮುಕ್ಕೂರು : ಮುಕ್ಕೂರು -ಕುಂಡಡ್ಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಹದಿನೈದನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಮೂರೈದು- ಹದಿನೈದರ ಹುತ್ತರಿ ಕಾರ್ಯಕ್ರಮವು ಸೆ.7 ಮತ್ತು 8 ರಂದು ಮುಕ್ಕೂರು ಶಾಲಾ ವಠಾರದಲ್ಲಿ ಜರುಗಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಆ.11 ರಂದು ವಿವಿಧ ದೇವಾಲಯ, ದೈವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯ, ನಳೀಲು ಶ್ರೀ ಸುಬ್ರಹ್ಮಣ್ಯ ದೇವಾಲಯ, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯ, ಮೇಲಿನ ಮುಕ್ಕೂರು ತರವಾಡು ಕ್ಷೇತ್ರ ಹಾಗೂ ಕುಂಡಡ್ಕ ಶ್ರೀ ಆದಿಬ್ರಹ್ಮ ಮೊಗೇರ್ಕಳ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಅನುಗ್ರಹ ನೀಡುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಅರ್ಚಕ ಶ್ರೀನಿವಾಸ ಹೆಬ್ಬಾರ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಆ ಬಳಿಕ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಉಪಸ್ಥಿತಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ನಳೀಲು ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಕ್ಷೇತ್ರದ ಅರ್ಚಕ ಪ್ರವೀಣ್ ಶಂಕರ್ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಅರ್ಚಕ ಸುರೇಶ್ ಉಪಾಧ್ಯಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಮೇಲಿನ ಮುಕ್ಕೂರು ತರವಾಡು ಕ್ಷೇತ್ರದಲ್ಲಿ ಲಕ್ಷ್ಮೀಶ ಬೈಪಡಿತ್ತಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕುಂಡಡ್ಕ ಶ್ರೀ ಆದಿಬ್ರಹ್ಮ ಮೊಗೇರ್ಕಳ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ದೈವಸ್ಥಾನದ ಅಡಳಿತ ಸಮಿತಿಯ ಪ್ರಮುಖರಾದ ಚನಿಯ ಕುಂಡಡ್ಕ ಅವರ ಉಪಸ್ಥಿತಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ನೇತೃತ್ವದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ವಿವಿಧೆಡೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಪೆರುವಾಜೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಮಾಜಿ ಸದಸ್ಯ ಜಯಪ್ರಕಾಶ್ ರೈ ಪೆರುವಾಜೆ, ನ್ಯಾಯವಾದಿ ಬಾಬು ಗೌಡ ಅಡ್ಯತಕಂಡ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ದಯಾನಂದ ರೈ ಕನ್ನೆಜಾಲು, ಪೆರುವಾಜೆ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಕ್ಷಿತ್ ಪೆರುವಾಜೆ, ಪೆರುವಾಜೆ ಶ್ರೀ ಕ್ಷೇತ್ರದ ವ್ಯವಸ್ಥಾಪಕ ವಸಂತ ಪೆರುವಾಜೆ, ಮುಕ್ಕೂರು-ಕುಂಡಡ್ಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಕುಂಡಡ್ಕ, ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ, ಮಾಜಿ ಅಧ್ಯಕ್ಷರಾದ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ಜಯಂತ ಗೌಡ ಕುಂಡಡ್ಕ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಮೊದಲಾದವರು ಉಪಸ್ಥಿತರಿದ್ದರು.