ಬಂಟ್ವಾಳ : ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಸತತ ಮೂರನೇ ಬಾರಿಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ನೀಡುವ ಸಾಧನಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

2023-24ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ತನ್ನ ಕಾರ್ಯ ದಕ್ಷತೆಯನ್ನು ಮೆರೆದು ದಾಖಲೆಯ ರೂ. 690.20 ಕೋಟಿಗಳ ವ್ಯವಹಾರವನ್ನು ಮಾಡಿರುತ್ತದೆ. ರೂ. 123 ಕೋಟಿ ರೂಪಾಯಿಗಳ ಠೇವಣಿ ಹೊಂದಿದ್ದು, ಸದಸ್ಯರ ಹೊರಬಾಕಿ ಸಾಲ ರೂ. 83.76 ಕೋಟಿ, ಸಾಲ ವಸೂಲಾತಿ ಪ್ರಮಾಣ ಶೇಕಡಾ 92.27 ರಷ್ಟಿದ್ದು, ವರದಿ ವರ್ಷದಲ್ಲಿ ರೂ. 2.97 ಕೋಟಿ ಲಾಭಗಳಿಸಿದ್ದು, ಪ್ರಸ್ತುತ ಬ್ಯಾಂಕಿನ ದುಡಿಯುವ ಬಂಡವಾಳ 154 ಕೋಟಿಗಳಾಗಿರುತ್ತದೆ.
ಬ್ಯಾಂಕ್ ಹಲವಾರು ವರ್ಷಗಳಿಂದ ಆಡಿಟ್ ವರ್ಗಿಕರಣದಲ್ಲಿ ‘ಎ’ ತರಗತಿಯನ್ನು ಹೊಂದಿದ್ದು, ಈ ಎಲ್ಲಾ ಸಾಧನೆಗಳನ್ನು ಗುರುತಿಸಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಎನ್ ರಾಜೇಂದ್ರ ಕುಮಾರ್ ರವರು ಬ್ಯಾಂಕಿನ ಮಹಾ ಸಭೆಯಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಹೆಚ್.ಜಗನ್ನಾಥ್ ಸಾಲಿಯಾನ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್.ಕೆ ರವರಿಗೆ ಶಾಲು ಹೊದಿಸಿ ಸನ್ಮಾನಿಸಿ ಪ್ರಶಸ್ತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ವಿಶ್ವನಾಥ, ಎಂ ಮತ್ತು ಉದಯ ಕುಮಾರ್ ಎ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಹೆಚ್.ಎನ್. ರಮೇಶ್ ಉಪಸ್ಥಿತರಿದ್ದರು.



























